ನೆನಪುಗಳಲ್ಲಿ ನೀನಿರು ..ಅಷ್ಟೇ ಸಾಕು !

Posted: ಜೂನ್ 22, 2016 in ಕನ್ನಡ

ಪಿಸುಗುಟ್ಟಿದರೂ ಕೇಳಿಸುವಷ್ಟು ಹತ್ತಿರವಿದ್ದ! ನಾನೇ ಭ್ರಮೆಗೂ ವಾಸ್ತವಕ್ಕೂ ತಾಳೆಯಾಗದೇ ಎಲ್ಲದರಿಂದ ಮೈಲಿ ದೂರ ಹೋಗೋ ಹಪಹಪಿಯಲ್ಲಿ ಎದ್ದುಬಂದು ರಸ್ತೆಗಿಳಿದಿದ್ದೆ..ರಣಬೇಸಿಗೆಯ ಬಿರುಬಿಸಿಲ ನೆನಪೇ ಇಲ್ಲದ ಮನಸ್ಸು ಮತ್ತದೇ ಇಬ್ರಾಹಿಂ ರೋಜಾದ ನುಣುಪು ಕಲ್ಲುಗಳಮೇಲೆ ಏಕಾಂಗಿಯಾಗಿ ಒರಗಿಕೊಳ್ಳಲು ಹಠ ಮಾಡಿತ್ತು..

ಈ ನೆನಪುಗಳ ಹಂಗೇ ಬೇಡ ಅನ್ನೋದು ಆ ಹೊತ್ತಿನ ನಿರ್ಲಿಪ್ತತೆಗಷ್ಟೇ..ಆದರೆ ತಲೆಯಲ್ಲಿ ಮಾತ್ರ ಕತ್ತಲ ಮೂಟೆಯನ್ನು ಹೊತ್ತೇ ತಿರುಗುತ್ತೇವೆ.ವರ್ಷಗಳ ಹಿಂದೆ ಹೆಗಲಿಗೊರಗಿ ಹಗಲ ಮರೆತ ಕಥೆಗಳು..ನನ್ನ ಪ್ರತೀ ಮುನಿಸೂ ನಿನ್ನ ಕಣ್ಣ ತೋಯಿಸಿದ ಕಥೆಗಳು, ಗೊತ್ತೇ ಇರದ ಟಾರು ರೋಡ ಮೇಲೆ ನಿನ್ನ ಬೈಕ್ ಚಕ್ರ ಉರುಳಿದ ಸಾವಿರದ ದಿನಗಳು, ನಂಗೊಂದು ಗೌರವವಿಟ್ಟು ಅರ್ಧಕ್ಕೆ ಸುಟ್ಟುಹೋಗಿ ನೆಲ ಕಂಡ ಲೆಕ್ಕವಿಡಲಾರದ ಸಿಗರೇಟ್ ಗಳು, ಬಡ್ಡೇ ದಿನ ಮುತ್ತಿಕೊಂಡಿದ್ದ ನಿನ್ನ ಪ್ರಾಣಗೆಳೆಯರ ಗುಂಡಿನ ಆಹ್ವಾನಕ್ಕೆ ಅಸಹಾಯಕತೆಯಿಂದ ನನ್ನತ್ತ ನೋಡಿದ ನೆನಪುಗಳು ಇನ್ನೂ….

ದಿನ, ವಾರ, ತಿಂಗಳು, ವರ್ಷಗಳೇ ಓಡಿದವು! ಆದರೆ ನೀ ಕೊಟ್ಟ ಮೊತ್ತಮೊದಲ ಗ್ರೀಟಿಂಗಿನೊಳಗಿನ ಘಮ ಬದಲಾಗಿಲ್ಲ…ದಿನಕ್ಕೊಮ್ಮೆ ಕೇಳುವ ನೀ ಹಾಡಿದ ಘಜಲಿನ ಆ ಲಯ ಬದಲಾಗಿಲ್ಲ, ಬರಿದೇ ಬರೆಯುವ ನನ್ನ ಹವ್ಯಾಸಕ್ಕೆ ರಾಶಿಹಾಕಿದ್ದ ಪೆನ್ನುಗಳ ಶಾಯಿ ಇನ್ನೂ ಖಾಲಿಯಾಗಿಲ್ಲ, ಮಳೆಯ ದಿನ ಕೊಡಿಸಿದ್ದ ಆಕಾ಼ಶನೀಲಿ ಬಣ್ಣದ ಸೀರೆಯ ಜರಿಯಂಚು ಮಾಸಿಲ್ಲ, ಬಿಡದೇ ನಗುವ ಸ್ಪ್ರಿಂಗ್ ಬೊಂಬೆಯೂ ಸೋತು ಮಲಗಿಲ್ಲ!

ಒಂದು ಕೊನೆಯ ತಣ್ಣನೆಯ ಕನಸಿದೆ..ನಿರುಪದ್ರವಿ ದುರಾಸೆ ಅಂತಾರಲ್ಲ..ಅಂಥದ್ದು! ಕೈಯ ಮೇಲಿನ ಮೂರು ವರ್ಷ ಹಳೆಯ ಹಚ್ಚೆಯೂ, ಬೈಕ್ ಮೇಲಿರೋ ನನ್ನ  ಸಹಿಯೂ, ಪಾಸ್ವರ್ಡಿನಲ್ಲಿರೋ ನನ್ನ ಹೆಸರೂ ಬದಲಾದ ದಿನ ಮತ್ತೆ ಸಿಗಬೇಕು.ಇದೇ ಬತ್ತಿದ ನದಿಯ ಸೇತುವೆಯ ಬಳಿ ಮತ್ತೆರಡು ತೆಂಗಿನಗಿಡ ನೆಡಬೇಕು. ಇದಿಷ್ಟು ಮನದಟ್ಟುಮಾಡಿಕೊಡಲು…..ಪ್ರೀತಿ ಅನ್ನೋದು ಬರೀ ಇಬ್ಬರಿಗಲ್ಲ..ಸಲಹಿದವರ ನಗುವ ಸಾರ್ಥಕತೆಗೇ..ಮತ್ತು…ಕಾರಣವಿದ್ದೇ ಬೇರೆಯಾಗಿ ಬದುಕ ಬದಲಾಯಿಸಿಕೊಂಡು ತಿರುವಿನಲ್ಲೊಮ್ಮೆ ಹಿಂತಿರುಗಿ ನೋಡಿ ಮುಖದಲ್ಲಿ ಮೂಡಿಸಿಕೊಂಡ ಮುಗುಳ್ನಗುಗೆಗೆ!!
….

ಟಿಪ್ಪಣಿಗಳು
  1. Suresh ಹೇಳುತ್ತಾರೆ:

    ನೆನಪುಗಳ ಮಾತು ಮಧುರ…:)

ನಿಮ್ಮ ಟಿಪ್ಪಣಿ ಬರೆಯಿರಿ