ಮನದ ತೀರದ ತುಂಬಾ ಮರೆಯದ ಹೆಜ್ಜೆಗುರುತು!

Posted: ಜನವರಿ 25, 2011 in ಕನ್ನಡ

ನೆನಪುಗಳು!ಇವೇ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತವೆ.. ಮತ್ತವೇ ನೊಂದ ಮನಸ್ಸನ್ನು ಸಂತೈಸುತ್ತವೆ ಕೂಡಾ!ಅವುಗಳು ಸದಾ ನಮ್ಮ ಅದೊಂದು ಕಾಲದ…ಅನ್ನೋ ನೆನಪಿನ ಗಣಿಯ ವಜ್ರ.ಸರಿಯಾಗಿ ಏಳೆಂಟು ವರ್ಷಗಳ ಹಿಂದೆ ಹೈಸ್ಕೂಲ್ ಮುಗಿಸುವ ತರಾತುರಿಯಲ್ಲಿದ್ದೆವಲ್ಲ.ಆಗೆಲ್ಲ ನಮಗೆ ಬದುಕು ಇಷ್ಟು ಬೇಗ ಆಧುನಿಕವಾಗಿ ಬಿಡಬಹುದು ಅನ್ನೋ ಕಲ್ಪನೆಯೇ ಇದ್ದಿರಲಿಲ್ಲ.ಯಾವ ಗೋಜಲು,ಗೊಂದಲ ಗಳೇ ಇಲ್ಲದ ದಿನಗಳವು!ಸ್ಕೂಲ್ ಡೇಯ ಹಿಂದಿನ ದಿನ ನಾಟಕ ,ಡ್ಯಾನ್ಸ್ ಪ್ರಾಕ್ಟಿಸ್ ಮಾಡಿ ಶಾಲೆಯ ಹಿಂದಿದ್ದ ಮರಗಳ ಅಡಿ ಕುಳಿತು ಮಾತಾಡುವಾಗ ಬಹುಶಃ ನಮ್ಮ  ನಾಲ್ವರಿಗೂ ಗೊತ್ತಿತ್ತು ಮುಂದೆ ಹೀಗೆ  ಭೇಟಿ ಆಗೋದು  ಕಷ್ಟ ಅಂತ.ಅಷ್ಟು ದೂರದ ಕಾಲೇಜಿಗೆ ನಮ್ಮೆಲ್ಲರ ಮನೇಲಿ ಕಳಿಸ್ತಾರೋ ಇಲ್ವೋ ಏನೇ ಆದರೂ ಸಿಗ್ತಾನೆ ಇರೋಣ ಆಯ್ತಾ ಅಂದಾಗ ಹಾಂ ಆಯ್ತು ಅದಕ್ಕೇನು ಅಂದಿದ್ದೆ..ಆಮೇಲೆ ದಿನಗಳೆಲ್ಲ ಹ್ಯಾಗೆ ಓಡಿಬಿಟ್ಟವಲ್ಲ, !ಈಗ ಕಾಡುತ್ತಿವೆ ನೆನಪುಗಳು ಸಾಯುವಷ್ಟು…!
ಅಂದುಕೊಂಡಿದ್ದು ಸಾಧಿಸಿ ಸಂಪೂರ್ಣವಾಗಿ ಆಧುನಿಕತೆಯ ಗೂಡೊಳಗೆ  ಬಂದ ಮೇಲೆ ಇಂದು ಎಲ್ಲವೂ ಇದೆ ಇಲ್ಲಿ ..ಸಮಯ ಮರೆಸುವ ಸ್ನೇಹಿತರು ,ಅಂತರ್ಜಾಲಗಳು, ರೆಸಾರ್ಟ್, ಗೇಮ್ಸ್,ಪಿಕ್ನಿಕ್ ,…ಇನ್ನೂ..ಆದರೆ ಬರೀ ನೂರು ಪುಟಗಳ ನನ್ನ ಹಳೆಯ ಆಟೋಗ್ರಾಫ್ ಕೊಡೊ ಅಧ್ಬುತ ಭಾವುಕತೆಯನ್ನು ಯಾವ ಆರ್ಕುಟ್, ಫೇಸ್ ಬುಕ್ ಗಳು ಕೂಡಾ ಕೊಡಲಾರವು..ಈ ಆಟೋಗ್ರಾಫ್ ನಲ್ಲಿ ರಜನಿ ಬರೆದ ಒಂದು ವಾಕ್ಯವಿದೆ “ನಮ್ಮ ಜೀವನ ಒಂದು ಬಸ್ ಪ್ರಯಾಣ ಇದ್ದ ಹಾಗೆ .ನಮ್ಮ ನಮ್ಮ ಸ್ಟಾಪ್ ಬಂದಾಗ ಇಳಿದು ಕೊಳ್ಳಲೇಬೇಕು”..ಹೇಯ್, ತಿರುಗಿ ಬಂದಿದ್ದೆನಲ್ಲಾ  ನೀವೆಲ್ಲ ಇಳಿದಲ್ಲಿ ನಿಮ್ಮನ್ನು ಹುಡುಕಿಕೊಂಡು !!?ಎಲ್ಲಿದ್ರಿ ನೀವೆಲ್ಲಾ ಅಲ್ಲಿ ?ಬರೀ 4-5 ವರ್ಷದಲ್ಲೇ ನಿಮ್ಮ ಮೂರೂ ಜನರ ಮದುವೆಯಾಗಿ ಎಲ್ಲೆಲ್ಲೋ ಹೋಗಿಬಿಟ್ಟಿರಲ್ಲ..ನಿನ್ನ ಅಡ್ರೆಸ್ ,ಫೋನ್ ನಂಬರ್ ತುಂಬಾ ಹುಡುಕಿದ್ಲು.ಅಡ್ರೆಸ್ ಕೊಡಲೇ ಇಲ್ವಂತೆ ನೀನು.ಮದುವೆಗ್ ಕರಿಯೋಕೆ ಆಗಲಿಲ್ಲ ಅಂತ ಎಸ್ಟ್ ಬೇಜಾರ್ ಮಾಡ್ಕೊಂಡ್ಲು ಗೊತ್ತ ..ಹೆಚ್ಚು ಕಮ್ಮಿ ಮೂವರ ಮನೆಯಲ್ಲೂ ಹೇಳಿದ ಮಾತಿದು ..ಪೇಲವ ನಗೆ ನಕ್ಕಿದ್ದೆ..ಮುಂದೆ ಎಲ್ಲಿ ಹ್ಯಾಗೆ ಎಷ್ಟು ಓದ್ತೀನಿ ಅಂತ ಗೊತ್ತಿಲ್ಲದವಳು ಏನು ಅಡ್ರೆಸ್ ಕೊಟ್ಟಿರಬೇಕಿತ್ತು?ನಿಮ್ಮೆಲ್ಲರ ಮದುವೆ ಆಲ್ಬಮ್ ನೋಡ್ಲಿಕ್ಕೆ ಸಿಕ್ಕಿದ್ದಷ್ಟೇ ಪುಣ್ಯ !
ಹಾಗೆ ವಾಪಾಸ್ ಬರೋವಾಗ ಶಾಲೆಯ ಬಳಿ ಹೋಗಿದ್ದೆ..ಸಡನ್ ಆಗಿ “ಮೈ ಆಟೋಗ್ರಾಫ್ ” ಸಿನೆಮಾ ನೆನಪಾಗಿತ್ತು .ಎಡ ಬದಿಯಲ್ಲಿ ವನ ಮಹೋತ್ಸವ ದ ದಿನ ನೆಟ್ಟ ಹೆಸರು ಗೊತ್ತಿಲ್ಲದ ಗಿಡ ಅಷ್ಟೆತ್ತರಕ್ಕೆ  ಬೆಳೆದಿತ್ತು.ಬೆಳಿಗ್ಗೆ ಬೇಗ ಹೋಗಿ ಸರದಿಯ ಪ್ರಕಾರ ಗಿಡಗಳಿಗೆ ನೀರು ಹಾಕಿದ್ದು,ಗಾಳಿ ಮರದ ಕೆಳಗೆ ಸಾಲಾಗಿ ಕುಳಿತು ಓದಿದ್ದು . ಯಾವುದಾದರೂ ಸರ್ ಬರದಿದ್ದಾಗ ಖುಷಿಯಿಂದ ಆಫಿಸ್ ರೂಮ್ನಿಂದ ಓಡಿಬಂದು ಕ್ಲಾಸಿಗೆಲ್ಲ ಕಿರುಚಿ ಹೇಳಿದ್ದು, ..ನೆನಪಿಸಿಕೊಂಡಷ್ಟೂ …..
ಆಟದ ಮೈದಾನದ ಪಕ್ಕದಲ್ಲಿದ್ದ ಬಾವಿಯನ್ನೊಮ್ಮೆ ಇಣುಕಿ ನೋಡಿದಾಗ ಏನೋ  ತಳಮಳ !ಅದ್ಯಾಕೆ ಕಣ್ಣಲ್ಲಿ ನೀರು ?ಪಕ್ಕದಲ್ಲಿ ರಸ್ತೆಗೆ ಡಾಂಬರು  ಹಾಕುತ್ತಿದ್ದವರಿಗೆನೋ ಅನುಮಾನ!ಮತ್ತೆ ಸರಿಯೆನಿಸದೆ ವಾಪಸ್ಸಾಗ ಹೊರಟವಳು ನಿಂತು ಬಿಟ್ಟೆ .ಕೊನೆಯ ಪರೀಕ್ಷೆಯ ದಿನ ಹಿಂದಿದ್ದ ಮಾವಿನ ಮರ ಹತ್ತಿ ಹೊಸ ಟೊಂಗೆಯೊಂದಕ್ಕೆ  ನಮ್ಮ ನಾಲ್ವರ ಬಳೆಗಳನ್ನು ಹಾಕಿ ಬಂದಿದ್ದೆವಲ್ಲ ಪ್ರತೀ ವರ್ಷ ಇದೇ ಮಾರ್ಚ್ ನಲ್ಲಿ ಬಂದು ನೋಡೋಣ ಅಂತ,,,ಓಡಿಬಂದು ನೋಡಿದ್ದೆ.ಅರೇ..ಅಲೆಲ್ಲಿತ್ತು ಮರ ?ಅಲ್ಲೊಂದು ಮರವಿದ್ದಿದ್ದೆ ಸುಳ್ಳು ಅನ್ನೋ ಹಾಗೆ ಸಮತಟ್ಟಾದ ನೆಲ .ಪಕ್ಕದಲ್ಲಿ ದೊಡ್ಡ ಟವರ್!ನೀವೆಲ್ಲಾ ಹೋಗಿ ನೋಡಿ ನನ್ನ ತುಂಬಾ ನೆನಪಿಸಿಕೊಂಡಿರಬಹುದಲ್ಲಾ?!
ಎಲ್ಲಿ ಹೋದ್ರಿ ನೀವೆಲ್ಲಾ..ಆ ಮರದಡಿ ಬಿದ್ದ  ಮಿಡಿ ಗಾಯಿಗಳನ್ನು ಕಾಗೆ ಎಂಜಲು  ಮಾಡಿ ತಿಂದ ದಿನಗಳೆಲ್ಲಿ ಹೋಯ್ತು.ಗುಡ್ಡದ ಹಿಂದೆ ಹೋಗಿ ಕಲ್ಲುಗಳನ್ನು ಒಲೆಯಂತಿರಿಸಿ ಮನೆಯಿಂದ ಕದ್ದು ತಂದ ಬೆಲ್ಲವನ್ನು ಪುಟ್ಟ ಪಾತ್ರೆಯಲ್ಲಿ ಬಿಸಿ ಮಾಡಿ ತಿನ್ನುತಿದ್ದ ನಮ್ಮ ನಾಲ್ವರಲ್ಲಿ ನಾನು ಮಾತ್ರ ಯಾಕೆ ಬೇರಾದೆ ..ಯಾಕಿಷ್ಟು ಬದಲಾದೆ?!ಬಿದ್ದ ಹಣ್ಣು ತಿನ್ನೋದ್ಯಾಕೆ ಅಂತ ಎತ್ತರದ ಗೇರು ಮರ ಹತ್ತಿ ಹಣ್ಣನ್ನು ಅಲ್ಲೇ ಕೂತು ತಿಂದು ಇಳಿದಾಗ ಅಂಗಡಿಯ ಅಜ್ಜ ಎಂಥ ಗಂಡು ಬೀರಿ ಇವಳು ಅಂದಾಗ ಕಣ್ಣಲ್ಲಿ ನೀರು ತರಿಸಿಕೊಂಡು ಓಡಿದವಳು ಇಂದು ತಪ್ಪು ಮಾಡಿ ಅದನ್ನೇ ಸಮಜಾಯಿಸಿಕೊಂಡು  ಇದು ನನ್ನ “attitude” ಅನ್ನೋ ಹೆಸರು ಕೊಡ್ತೀನಿ .ಭಾಷೆ ,ದೇಶ ಅಂತ ಭಾಷಣ ಬಿಗಿತಿದ್ದವಳು ಇಂದು ಯಾವುದೋ ದೇಶದ ಅಕೌಂಟ್ಸ್ ನೋಡ್ತೀನಿ.ಸ್ವಲ್ಪ ಬದುಕು ಬದಲಾಯಿಸಿದ್ದು,,ಉಳಿದದ್ದು ನಾನೇ ಬದಲಾಯಿಸಿಕೊಂಡಿದ್ದು ..ಹ್ಮ್…..ನಿಮ್ಮನ್ನೂ ಬದುಕು ಈಗ ಯಾವ್ಯಾವ ಗೊಂದಲದಲ್ಲಿ ಇರಿಸಿದೆಯೋ..
 
ಆಗೆಲ್ಲಾ ಆಡಿದ ಆಟ, ಮಾಡಿದ ತುಂಟತನಗಳನ್ನು ನೆನಪಿಸಿಕೊಂಡರೆ ಅವ್ಯಕ್ತ ವೇದನೆಯಾಗುತ್ತೆ, ಆ ಕಾಲ ಇನ್ನೆಂದೂ ಬರದಲ್ಲ ಅಂತ ನೆನಪಾಗಿ …ಒಮ್ಮೊಮ್ಮೆ ಅನ್ನಿಸುತ್ತೆ ನಾವೆಲ್ಲಾ ಸ್ನೇಹದ ನೆರಳಲ್ಲಿ ಒಂದಾಗಿ ಇರಲೇಬಾರದಿತ್ತೆಂದು.ನೆನಪಿಸಿಕೊಂಡು ಪ್ರತೀ ಸಲ  ಖಿನ್ನರಾಗೋ ಬದಲು ಆ ನೆನಪುಗಳೇ ಇಲ್ಲದಿರುತ್ತಿದ್ದರೆ??! ನಂಗೊತ್ತು ಈ ಬದುಕು ,ಕಾಲ ಅದೆಲ್ಲಿಯೂ ನಿಲ್ಲೋದಿಲ್ಲ ,ಸದಾ ನಮ್ಮತನಗಳ ವಿಸ್ತರಣೆಯೊಂದಿಗೆ,ಬೀಸುವ ಬಿರುಗಾಳಿಯಂತೆ. ಒಮ್ಮೊಮ್ಮೆ ಮೈ ಮನಸ್ಸು ಪಡೆದ ಗಾಯ, ನೋವುಗಳನ್ನು ಮರೆಸುವ ವೈದ್ಯನಂತೆ ಉರುಳುತ್ತಲೇ ಇರುತ್ತೆ,ಬದುಕ ಜಾತ್ರೆಯಲ್ಲಿ ಸ್ವಾರ್ಥಿಗಳಾಗುತ್ತ ಮುಂದೆ ಹೋಗುವ ತವಕದಲ್ಲಿ ಹಿಂದೆ  ಕಳೆದುಕೊಂಡ ಆಟಿಕೆಗಳ ನೆನಪಿರೋದಿಲ್ಲ ನಮಗೆ ..ನೆನಪಾಗಿ ಹುಡುಕ ಹೊರಟರೆ ಅದು ಮತ್ತೆ ಸಿಗುವುದೂ ಇಲ್ಲ..ಆ ಕಾಲ ಮತ್ತೆ ಬರಲಿ ಅನ್ನಿಸಿದರೂ ಬದುಕಿನ ಜಂಜಾಟ ಬಿಡೋಲ್ಲ,ಯಾರಿಗೂ ಕಾಯದೆ ಚಲಿಸುತ್ತಲೇ ಇರುವ ಕಾಲವನ್ನು ಪುನಃ ತಿರುಗಿಸೋಕೂ ಆಗೋಲ್ಲ..ಆದರೂ ಮತ್ತೆ ಮತ್ತೆ ವ್ಯಥೆಯೆನ್ನಿಸುವುದುಇನ್ನು ಮುಂದೆ  ನೀವೆಲ್ಲಾ ಒಂದು ನೆನಪು ಮಾತ್ರ ನನ್ನ ಪಾಲಿಗೆ ಎಂದು ನೆನಪಾದಾಗ !

Advertisements
ಟಿಪ್ಪಣಿಗಳು
 1. ಆಸು ಹೆಗ್ಡೆ ಹೇಳುತ್ತಾರೆ:

  ವಾಣಿ,
  ಕೆಲವೊಮ್ಮೆ, ನೆನಪುಗಳ ಜಾಡು ಹಿಡಿದು ಅಲೆದಾಡೋದು, ನಮ್ಮ ಮನಸ್ಸಿಗೆ ಎಲ್ಲಕ್ಕಿಂತಲೂ ಹೆಚ್ಚಿಗೆ ಮುದ ನೀಡುವ ಕೆಲಸ ಅಂತನಿಸುತ್ತದೆ.

  ಆ ನೋವಿನ ಗೆರೆಗಳೆಡೆಯಲ್ಲೂ ನಲಿವಿನ ಸೆಲೆ.
  ನೋವೂ ಅವ್ಯಕ್ತ, ನಲಿವೂ ಅವ್ಯಕ್ತ!
  ಎಷ್ಟು ಬಣ್ಣಿಸಿದರೂ ಬಹಳಷ್ಟು ಅವ್ಯಕ್ತ!

  ಆದರೆ, ಅದ್ಯಾಕೋ ಒಂದು ಸುಂದರವಾದ ಬರಹವನ್ನು ತರಾತುರಿಯಲ್ಲಿ ಮುಗಿಸಿದಂತನಿಸಿತು.

  ಪ್ರತಿಯೊಂದು ಚಿಹ್ನೆಯ (ಅಲ್ಪವಿರಾಮ, ಪೂರ್ಣ ವಿರಾಮ, ಅಶ್ಚರ್ಯ ಸೂಚಕ, ಇತ್ಯಾದಿ ಇತ್ಯಾದಿ) ನಂತರ ಒಂದು ಅಕ್ಷರದಷ್ಟು ಖಾಲಿ ಜಾಗ ಬಿಡುವುದರಿಂದ ನಮ್ಮ ಬರಹಗಳು ಇನ್ನೂ ಸುಂದರವಾಗುತ್ತವೆ. ಅಲ್ಲದೆ ಇಂತಹ ಚಿಹ್ನೆಗಳ ಮೊದಲು ಖಾಲಿ ಜಾಗ ಬಿಡದಿರುವುದೂ ಒಳ್ಳೆಯದು.

  ಯೋಚಿಸಿ, ಅಳವಡಿಸಿ ನೋಡಿ.

  – ಆಸು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s