ಕಾಡುವ ಹಳೆ ನೋವುಗಳನ್ನೆಲ್ಲಾ  ನಾಳೆಗೆ ಎತ್ತಿಟ್ಟು
ಹೊದ್ದು ಮಲಗುತ್ತೇನೆ ಆ ನೆನಪುಗಳನ್ನೆಲ್ಲ ಬಿಟ್ಟು
ಮತ್ತೆ ಪುನಃ ಮನಸ್ಸು ಅದೇ ನಾಯಿಯ ಡೊಂಕು ಬಾಲ
ಅಳುತ್ತದೆ ಗಾಯದ ಮೇಲೆ ಸ್ವತಃ ತಾನೇ ಬರೆಯಿಟ್ಟು

ವಂಚನೆಯ ಚೂಪುಗಲ್ಲಿಗೆ ಪಾಪದ ಹಕ್ಕಿ ಗುರಿಯಾಗಿದೆ
ಅಸಹಾಯಕತೆಯ ಗುಬ್ಬಿ ಮರಿ ಬರೀ ಶೂನ್ಯ ದಿಟ್ಟಿಸುತ್ತದೆ
ಏನಾದರೂ ಅದೆಂದಿಗೂ ಮತ್ತೆ ಮೇಲಕ್ಕೆ ಹಾರಲಾರದು
 ಪಕ್ಕದಲ್ಲೇ ಎರಡೂ ರೆಕ್ಕೆ ಶಾಶ್ವತವಾಗಿ ಮುರಿದು ಬಿದ್ದಿದೆ

ಬಿಟ್ಟುಬಿಡೋಕೆ ಕಷ್ಟವೇನಲ್ಲ ಸಂಬಂಧಗಳ ಕೊಂಡಿ
ಯಾರ ಹಂಗಿಲ್ಲದೆಯೂ ಉರುಳುತ್ತೆ  ಬಾಳ ಬಂಡಿ
ಒಂಟಿ ಎತ್ತೂ  ನಗುತ್ತಲೇ ಸಾಗಬಹುದು ನಿಲ್ದಾಣದತ್ತ
ಒಂದೇ ಬೇಡಿಕೆ ,ನೆನಪುಗಳೇ,ನೀವು ಮಾತ್ರ ಕಾಡಬೇಡಿ!

ಎಳೆದೆಳದ ಹಗ್ಗ, ನೋಡಬೇಕು ನನ್ನ ಕಯ್ಯಿಗಾ ಇಲ್ಲ ನಿನಗಾ
ಪ್ರೀತಿ ಹನಿಸಿದ ಕಣ್ಣಲ್ಲಿ ಈಗ ಕೆಂಪು ಬೆಂಕಿಯೇಕೆ ಗೆಳೆಯಾ
ನಿನ್ನೆ, ಇಂದು ಮತ್ತು ನಾಳೆ ಸೋಲುತ್ತಲೇ ಇರೋಳು  ನಾ
ಬಾಗಿಲು ತೆರೆದೇ ಇದೆ ನೀ ಆರಾಮಾಗಿ ಹೋಗಿ ಬಾ !

ನಿಂಗೆ ಬೇಡವಾದ ಕನಸುಗಳು ನಂಗೂ ಬೇಕಿಲ್ಲ
ಸದಾ ಕಾಡುವ ಆ ನೆನಪುಗಳ ಹಂಗೇ ಬೇಕಿಲ್ಲ
ಬದುಕೀಗ ನಾಟಕ ಮುಗಿದ ಖಾಲಿ ವೇದಿಕೆ
ಕಟ್ಟಿ ಕುಣಿದು ಬಿದ್ದುಹೋದ ಗೆಜ್ಜೆ ಮಾತ್ರ ಇನ್ನೂ ಸಿಕ್ಕಿಲ್ಲ ..

ಖಾಲಿ ಅಂಗಳದಲ್ಲಿ ನಾಳೆ ನೀ ಬಂದು ಮತ್ತೆ ಚುಕ್ಕಿಯನ್ನಿಟ್ಟರೂ
ಮೆರುಗು ಬರಲೆಂದು ನೂರು ಬಣ್ಣ ಅಲ್ಲಿ ಪೇರಿಸಿಟ್ಟರೂ
ನೋಡು,ನಂಗೆ ಇಡಬೇಕಾದ ರಂಗೊಲಿಯದೇ ನೆನಪಿರೋದಿಲ್ಲ
ನಿನ್ನ ಮೋಸಕ್ಕೆ ಕೇವಲ ಕಣ್ಣ ಹನಿ ಮಾತ್ರವೇ ಪುರಾವೆಯಲ್ಲವಲ್ಲ..

ನಂಗೂ ಗೊತ್ತು ನೆನಪೆನ್ನುವುದು ತಿರುಗಿ ಬರುತ್ತೆ ಬಿಡದಂತೆ
ನೋವೆನ್ನೋ ನೋವಿನಲ್ಲೇ  ಸ್ವ-ಸಾಂತ್ವಾನ ಪಡೆಯುವ ಹುಚ್ಚಿನಂತೆ
ಇನ್ನೇನು ಪೂರ್ತಿ ಹಾಳಾಗಲು ತಯಾರಾಗಿ ಕೂತುಬಿಟ್ಟಿದೆ ಈ ಬದುಕು
ನನ್ನೆಡೆಗಿನ ನಿನ್ನ ಅಷ್ಟೂ ದ್ವೇಷವನ್ನು ಮತ್ತೆ ಮತ್ತೆ  ಪ್ರೀತಿಸುವಂತೆ..

ಸರಿವ ಬದುಕಿನೆಡೆಯಲ್ಲಿ ಸುಮ್ಮನೆ
ಬಂದು ಹಾದುಹೋಗುವವರೆಷ್ಟೋ
ಒಮ್ಮೆಲೇ ಪರಿಚಯವಾಗಿ ಅಲ್ಲೇ
ಅಚ್ಚಳಿಯದೆ ನಿಂತುಬಿಡುವವರೆಷ್ಟೋ
ಹಲವರು ಕ್ಷಣ ಕೊರೈಸೋ ಮಿಂಚಿನಂತೆ
ಕೆಲವರು ಎಂದೆಂದೂ ಅಳಿಯದ ಚಿತ್ರದಂತೆ !

ಅಂದುಕೊಳ್ಳೋದಿದೆ ಹಲವು ಬಾರಿ
ಯಾರದ್ದೋ ನಿರ್ದೇಶನವಿರಬೇಕಿತ್ತು
ಅವರಿಷ್ಟದಂತೆ ಈ ಬದುಕಿರಬೇಕಿತ್ತು
ಮತ್ತೆ ಪುನಃ ದ್ವಂದ್ವದ ರೂವಾರಿ
ಇದು ನನ್ನಂತರಾಳದ ವೇದಿಕೆ ಬೇರೇನಿಲ್ಲ
ನಾನೇ ಸಂಯೋಜಕಿ ,ನಾನೇ ರಾಯಭಾರಿ
ಬೇರೆ ಯಾರದ್ದೂ ಹಂಗೇ ಬೇಕಿಲ್ಲ..

ಈಗೀಗ ಅರ್ಥವಾಗೋದೇ ಇಲ್ಲ ಜನರ ಧೋರಣೆ
ತಾವು ಮಾಡಿದರೆ ಸರಿ ಬೇರೆಯವರದ್ದು ತಪ್ಪಂತೆ
ಮೊದಲೆಲ್ಲ ಹಸಿವಿದ್ದರೂ ಹಂಚಿ ತಿನ್ನೋ ಸಹನೆ
ಈಗ ಪಾಠ ಹೇಳಿಕೊಟ್ಟವರೇ  ಬಚ್ಚಿಟ್ಟು ತಿಂದಂತೆ!
ಬದಲಾವಣೆಯ ಪದದಡಿಯಲ್ಲಿ  ಮನಸೆಲ್ಲಾ ಚಿಂದಿ
ಅತ್ತು ಹಗುರಾಗುವಷ್ಟೂ ಸಮಯವಿಲ್ಲ ಇಲ್ಲಿ
ನಾವೇ ನಿರ್ಮಿಸಿಕೊಂಡ ಗೂಡಲ್ಲಿ ನಾವೇ ಬಂಧಿ!

“ನಾಗಾ…
ನೀ ಹೀಂಗೆಲ್ಲ ಬಪ್ಪಕಾಗ..
ಮಕ್ಕಳ್ ಮರಿ ತಿರ್ಗು ಜಾಗ
ಜಾಗ ಖಾಲಿ ಮಾಡ ಬೇಗ …”

ಮನೆ ಕಡೆ ನಾಗರಹಾವು ಬಂದಾಗಲೆಲ್ಲಾ ಅದನ್ನು ಓಡಿಸೋವಾಗ “ಅದಕ್ಕೆ ನೋವು ಮಾಡಬೇಡಿ” ಅನ್ನೋ ದೊಡ್ಡವರ ರಾಗದ ಹಿನ್ನಲೆಯಲ್ಲಿ ನಮ್ಮ ಕುಂದಗನ್ನಡದ ಪ್ರಾಸ ಹೀಗಿತ್ತು :) ನಮ್ಮ ಹಳ್ಳಿಗಳಲ್ಲಿ ಹಾವಿನ ಬಗ್ಗೆ ಭಯ ಮತ್ತು ಆಸಕ್ತಿ ಸ್ವಲ್ಪ ಕಮ್ಮಿನೇ ಜನರಲ್ಲಿ.ಆದರೆ ನಂಗೆ ಮಾತ್ರ ಇವತ್ತಿಗೂ ಅಷ್ಟೇ ಉತ್ಸಾಹ ಅವುಗಳ ಬಗ್ಗೆ.ಅದರಲ್ಲೂ ನಾಗರಹಾವು ಅಂದ್ರೆ ಸಕತ್ ಖುಷಿ..ಅದು ಮಾಡುವಷ್ಟು ಗೊಂದಲ ,ಖರ್ಚು,ಭಯ ಮತ್ಯಾವ ಹಾವುಗಳು ಮಾಡೋದಿಲ್ಲ.ಅಪರೂಪಕ್ಕೆ ಅವುಗಳು ಕೋಳಿ ಗೂಡಲ್ಲಿರೋ ಮೊಟ್ಟೆ ತಿನ್ನೋಕೆ ಬಂದರೆ ಈ ಅಕ್ಕ ಪಕ್ಕದ ಮನೇಲಿ ಎಲ್ಲ ಹೋ ದೇವ್ರ್ ಹಾವ್ ಬಂತ್ ..ಎಂದು ಪಡುವ ಸಂಭ್ರಮವೋ ಸಂಭ್ರಮ!ನಂತರ  ಅದಕ್ಕಿಷ್ಟು ಹಾಲು ಇಟ್ಟು ,ಅಕ್ಕಿ ಚೆಲ್ಲಿ ಕೈ ಮುಗಿಯೋರು !ಆದರೆ ಅದು ಕುಡಿದದ್ದು ನಾ ನೋಡೇ ಇಲ್ಲ.ಪಾಪ !ಅದರ ಹೆದರಿಕೆ ಅದಕ್ಕೆ ಎಲ್ಲಿ ಹೊಡಿತಾರೋ ಅಂತ!ಯಾವ ಹಾವಿಗೂ ಇರದ ಮುಂಡು ಬಾಲ ಇದಕ್ಕೆ ಇರೋದರಿಂದ  ಅದರ ನಿಕ್ ನೇಮ್ ಮುಂಡಪ್ಪ.

ಒಮ್ಮೆ ನಮ್ಮ ಪಕ್ಕದ ಕಾಡಿಗೆ ನವಿಲು ಹಿಡಿಯುವ ಗುಂಪೊಂದು ಬಂದಿತ್ತು.ಅವರ ಜೊತೆ ನಾವು ಕೂಡ ನೋಡಲು ಹೋಗಿದ್ದೆವು .ಚಂದದ ನವಿಲು ಗರಿ ಸಿಗುತ್ತಲ್ಲಾ ಅಂತ!ಸರಿ ಹೋಗ್ತಾನೆ ಒಂದು ದೊಡ್ಡ ನವಿಲು ಸಿಕ್ಕಿಬಿಟ್ಟಿತು.ಅವರು ಅದನ್ನು ಕೊಲ್ತಾರೆ ಅಂತ ಮಾತ್ರ ನಮಗೆ ಗೊತ್ತಿರಲಿಲ್ಲ.ಅವರು ಅದನ್ನ ಕೊಂದು ಹೊಟ್ಟೆ ಸೀಳಿದಾಗ ಅಲ್ಲೊಂದು ಪುಟ್ಟ ನಾಗರ ಮರಿ!ಆಮೇಲೆ ನಾಗರ ಹಾವಿನ ಹೆಣ ಕಂಡ ತಪ್ಪಿಗೆ (ಅಷ್ಟು ಚಂದದ ನವಿಲು ಕೊಂದಿದ್ದು ಮಾತ್ರ ಸರಿಯಂತೆ ಅವರ ಪ್ರಕಾರ ) ಸರ್ಪ ಸಂಸ್ಕಾರ ,ಅದೂ ಇದೂ ಪೂಜೆ ಮಾಡಬೇಕಾಯ್ತು ,ಆಮೇಲೆ ನವಿಲು ಹಿಡಿಯೋದು ಬಿಟ್ಟಿರಬೇಕು ಬಹುಶಃ :)

ಒಂದು ಸಾರಿ ಮಳೆ ಬಂದಾಗ ಗುಡ್ಡದ ಬುಡದ ಮಣ್ಣು ಕೊಚ್ಚಿ ಹೋಗಿ ಒಂದು ಶಿಲೆಯ ಮೇಲೆ ೩ ಹಾವಿದ್ದ ಆಕೃತಿ ಸಿಕ್ಕಿತ್ತು.ಅದೊಂದು ದೊಡ್ಡ ಸುದ್ದಿ ಆಗಿ, ಊರಿನ ಜನರೆಲ್ಲಾ ಸೇರಿ ನಾಗ ಪ್ರತಿಷ್ಠೆ ಮಾಡಿ, ಒಂದು ಬನ ಕಟ್ಟಿಸಿ ಅಬ್ಬಬ್ಬ !ಅದೇ ನಮ್ಮ ಊರಲ್ಲೇ ಒಂದು ಐತಿಹಾಸಿಕ ಸ್ಥಳ ಇದೆ “ಕತ್ತಲೆ ಬಸದಿ” ಅಂತ..ಅಲ್ಲಿ ಹಾಳು ಬಿದ್ದಿರೋ ನೂರಾರು ಶಿಲೆಗಳ ಮೇಲೆ ಇರೋದು ಸಹ ಇಂತಹ ಕೆತ್ತನೆಗಳೇ !ಅಂತಹುದೆಲ್ಲ ಈಗ ಯಾರ್ಯಾರ ಮನೆಯಲ್ಲಿ ಬಟ್ಟೆ ಒಗೆಯೋ ಕಲ್ಲುಗಳಾಗಿವೆಯೋ , ಮನೆ ಸುತ್ತಲಿನ ಬೇಲಿಗಳಾಗಿವೆಯೋ!ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳೋದಿಲ್ಲ ಬಿಡಿ ನಮ್ಮ ಜನ!ಸರಿ, ನಾನು ಮತ್ತೆ ನನ್ನ ಗೆಳತಿ ಒಬ್ಬಳಿದ್ದಳು. ನಾವಿಬ್ಬರೂ ಸೇರಿ ಅಂತಹುದೇ ಒಂದು ಕಲ್ಲನ್ನು ತಂದು ಮನೆ ಪಕ್ಕದ ನಾಗಬನದ ಕಲ್ಲುಗಳ ಮಧ್ಯೆ ಇಟ್ಟೆವು..ಅದಕ್ಕೆ ಈಗಲೂ ಉಳಿದೆಲ್ಲ ನಾಗ ಕಲ್ಲುಗಳ ಜೊತೆ ಪೂಜೆ ನಡೆಯುತ್ತೆ .ಜನ ಮರುಳೋ ಜಾತ್ರೆ ಮರುಳೋ ಇನ್ನೂ ತಿಳಿದಿಲ್ಲ :)

ನೆನೆಸಿಕೊಂಡಾಗಲೆಲ್ಲ ಎಂಥಹ ಪರಿಸ್ಥಿತಿಯಲ್ಲೂ ನಗು ಬರೋ ಪ್ರಸಂಗ ಒಂದಿದೆ.ನಮ್ಮ ಊರಲ್ಲಿ ಒಬ್ಬ ಅರೆ ಹುಚ್ಚ ಇದ್ದ ಕೃಷ್ಣ ಅಂತ!ಅವನಿಗೆ ಹಾವುಗಳ ಬಗ್ಗೆ ಸ್ವಲ್ಪವೂ ಭಯ ಇದ್ದಿರಲಿಲ್ಲ .ಯಾವಾಗಲೂ ತನ್ನ ಹೆಗಲಿನಲ್ಲಿದ್ದ ಜೋಳಿಗೆಯನ್ನು ತೋರಿಸಿ ಇದರಲ್ಲಿ  ಹಾವಿದೆ ಗೊತ್ತಾ? ಅಂತಾ ಇದ್ದ. ಅದೇ ಕಾರಣಕ್ಕೆ ನಾನು ಅವನ ಅಭಿಮಾನಿ ಆಗಿದ್ದೆ.ಎದುರಿಗೆ ಸಿಕ್ಕಾಗಲೆಲ್ಲ ಪುಟ್ಟೀ ಈ ಹಾವು ಮಕ್ಕಳಿಗೆ ಕಚ್ಚೋದಿಲ್ಲ ಕೆಟ್ಟವರಿಗೆ ಮಾತ್ರ ಕಚ್ಚುತ್ತೆ ಗೊತ್ತಾ ಅಂತಿದ್ದ.ಅವನ ಕೈ ಮೇಲೊಂದು ಗರುಡನ ಹಚ್ಚೆ ಹಾಕಿಸ್ಕೊಂಡಿದ್ದ,ಏನೂ ಮಾಡದ ಹಸಿರು ಹಾವನ್ನು ಈಶ್ವರನ ರೀತಿ ಕುತ್ತಿಗೆಗೆ ಸುತ್ತಿಕೊಂಡೇ ,ಅವನ ನಿಲ್ಲದ ಹಾಡು “ಹಾವಿನ ಧ್ದ್ವೇಷ ,ಹನ್ನೆರಡು ವರುಷ, ನನ್ನ ರೋಷ ನೂರು ವರುಷ…..
ನಮ್ಮ ಮನೆ ಹಿಂದೆ ಇದ್ದ ಕಾಡಿನ ಮಧ್ಯಕ್ಕೊಂದು ದೊಡ್ಡ ಹಾಳು ಬಾವಿ ಇದೆ ..ಮೊದಲ್ಯಾರೋ ಬಾವಿ ತೊಡಿಸ ಹೋಗಿ ಕೆಳಗೆ ಅರೆಗಲ್ಲು ಸಿಕ್ಕಿ ,ಅದನ್ನು ಅಲ್ಲಿಗೇ ಬಿಟ್ಟಿದ್ದರು.ಮಳೆಗಾಲ ಆಗಿದ್ದರಿಂದ ಸ್ವಲ್ಪ ನೀರು ಇದ್ದಿತ್ತು ಅದರಲ್ಲಿ.ನಾವೆಲ್ಲಾ ದಿನವೂ ಸುಮ್ಮನೆ ಇಣುಕಿ ನೋಡುತ್ತಿದ್ದೆವು.ಒಂದಿನ ನೋಡೋವಾಗ ದೊಡ್ಡ ನಾಗರ ಹಾವು ಅದರೊಳಗೆ ಇದ್ದಿತ್ತು.ಅದು ಅಲ್ಲಿಗೆ ಹ್ಯಾಗೆ ಹೋಗಿರಬಹುದೋ ನಮಗಂತೂ ತಿಳಿಲಿಲ್ಲ .ಸರಿ ಹೋದ ಹಾಗೆ ವಾಪಸ್ ಬರಬಹುದು ಅಂತ ಸುಮ್ಮನಾಗಿದ್ವಿ.೨ ದಿನ ಆದರೂ ಹಾಗೇ ಇತ್ತು ಮೂರನೇ ದಿನ ನಮಗೆಲ್ಲ ಬೇಸರವೆನಿಸಿತು ಪಾಪ ತಿನ್ನೋಕು ಸಹ ಸಿಗೋದಿಲ್ಲ ಅಂತ.ಸಮಯಕ್ಕೆ ಸರಿಯಾಗಿ ಕೃಷ್ಣ ಬಂದ….ನೋಡಿ, ನಾನದನ್ನು ಕಾಪಾಡ್ತೀನಿ ಅಂತ ಬಾವಿ ಸಂದಿಯಲ್ಲಿದ್ದ ಕುರುಚಲುಗಳನ್ನು ಹಿಡಿದುಕೊಂಡು  ಕೆಳಗೆ ಹೋದ.ನಾವು ಬೇಡ ಅನ್ನಲೂ ಇಲ್ಲ, ನಮಗೆಲ್ಲ ತಮಾಷೆ !ಮನೆಗೆ ಹೋಗಿ ಒಂದು ಉದ್ದದ ಒರೆ ಕೋರೆ ಕೋಲುಗಳನ್ನು ತಂದು ನಾವೆಲ್ಲಾ ಒಂದಕ್ಕೊಂದು ಸೇರಿಸಿ ಕಟ್ಟುತ್ತಿದ್ದೆವು..ಅವನು ಸೀದಾ ಹೋಗಿ ಒಂಚೂರು ಭಯಪಡದೆ ಅದರ ಜೊತೆ ಮಾತಾಡ್ತಿದ್ದ..ಯಾಕೆ ಇಲ್ಲಿಗೆ ಬಂದೆ ? ಮನೆಯವರ ಜೊತೆ ಜಗಳ ಆಡಿದ್ಯ ಅಂತ !ಕೃಷ್ಣ ಅದಕ್ಕೆ ಕಿವಿ ಕೇಳೋದಿಲ್ಲ ಮಾರಾಯ ಅಂತ ನಾವು ಕೂಗಿದರೂ ಅವನದು ಅದೇ ಹುಚ್ಚುತನ.ಪಾಪ ಆ ಹಾವು ಮೊದಲೇ ಹೆದರಿಕೊಂಡಿತ್ತು..ಇವನ ಅಭಿನಯ ಕಂಡುಒಮ್ಮೆಲೇ ಹೆಡೆ ಅರಳಿಸಿಬಿಟ್ಟಿತು..ಇವನು ಒಮ್ಮೆಲೇ ಹಾಡು ಹಾಡಲು ಶುರು ‘ನಾಗರ ಹಾವೇ ಹಾವೊಳು ಹೂವೆ, ಬಾಗಿಲ ಬಿಲದಲಿ  ನಿನ್ನಯ ಸೇವೆ…ನಾವೆಲ್ಲ ಬಿದ್ದು ಬಿದ್ದು ನಗುತ್ತಿದ್ದೆವು.ಆಗ ಮೊದಲೇ ಹೆದರಿಕೊಂಡಿದ್ದ ಹಾವಿಗೆ ಇವ ಕೈ ಮುಗಿಯೋದು ನೋಡಿ ಏನನ್ನಿಸಿತೋ ಕೈಗೆ ಕಚ್ಚಿಬಿಟ್ಟಿತು.ಮತ್ತೆ ಯಾರಾಗಿದ್ದರೂ ವಿಷ ಏರುವ ಮೊದಲೇ ಭಯ ಏರಿ ಸಾಯ್ತಿದ್ದರು..ನಮ್ಮ ಹೀರೋ ಮಾತ್ರ ಹೇಗೆ ಇಳಿದನೋ ಹಾಗೆ ಹತ್ತಿ ಬಂದು ಮಾತೇ ಆಡದೆ ಕುಣಿಯುತ್ತಾ ಹೋಗಿಬಿಟ್ಟಿದ್ದ.

 
ಅವನು ಪದೇ ಪದೇ ಹೇಳೋದು,ಮುಳ್ಳು ಗುಡ್ಡೆಯ ನಾಗಬನದಲ್ಲಿ ನಾಗಮಣಿ ಇದೆ ಅಂತ !ಯಾವ ಹಾವು ಯಾರಿಗೂ ಒಂದೇ ಒಂದು ಸಲವೂ ಕಚ್ಚದೆ ಹುತ್ತದ ಒಳಗೆ ಸಾವಿರಾರು ವರ್ಷ ಮಲಗಿ ಒಂದಿನ ವಿಷವನ್ನು ಕಕ್ಕಿ ಅದೇ ವಿಷ ನಾಗ ಮಣಿ ಆಗುತ್ತಂತೆ!ಆ ಮಣಿ ಆ ಹುತ್ತದಲ್ಲಿದೆ ಅಂತ ..ಕೇಳಲು ತುಂಬಾ ಸೊಗಸಾಗಿತ್ತು ಅವನ ಮಾತು,ಹಾವಿನ ಪೊರೆಗಳ ಸಂಗ್ರಹವೇ ಇತ್ತು ಅವನ ಬಳಿ!ಒಂದು ಕಾಲದಲ್ಲಿ ಸರ್ಪ ಶಾಸ್ತ್ರಜ್ಞ ಆಗಿರಬಹುದಾ ಅಂತ ನಂಗೆ ಅನುಮಾನ !ಅವನ ಹತ್ತಿರ ಒಂದು ಬೆಣಚುಕಲ್ಲು ಇತ್ತು..ಅದನ್ನು ಹಾವಿನ ಕಡಿತದ ಮೇಲೆ ಇಟ್ಟರೆ ವಿಷ ಹೀರುತ್ತದೆಯಂತೆ.ನಿಜವಾಗಿರಬಹುದು ಯಾರಿಗ್ಗೊತ್ತು .. (ಅವನು ನಮ್ಮ ಜೊತೆ ಮಾತಾಡಿದ ಇದೇ ಹೋಲಿಕೆಗಳ ವಿಷಯಗಳನ್ನು ನಾನು ಸರಿ ಸುಮಾರು ೬ ವರ್ಷಗಳ ,ನಂತರ ರವಿ ಬೆಳಗರೆಯ ಸರ್ಪ ಸಂಬಂಧದಲ್ಲಿ ಓದಿದ್ದೆ  ಸ್ವಲ್ಪ ಬದಲಾವಣೆಯೊಂದಿಗೆ,ಅಂದರೆ ವೈಜ್ಞಾನಿಕ ಹಿನ್ನಲೆಯೊಂದಿಗೆ).ಆದ್ರೆ ಮಕ್ಕಳ ವಿನಃ ಅವನ ಬಳಿ ಮತ್ಯಾರೂ ಹೋಗ್ತಾನೆ ಇರಲಿಲ್ಲ!ಹುಣ್ಣಿಮೆ ದಿನ ನೀಲಾವರ(ಊರಿನ ಹೆಸರು)ಕ್ಕೆ ಹೋಗ್ತೀನಿ,ಅಂದಿದ್ದ ನಾವ್ಯಾರೂ ಅವನನ್ನು ಮತ್ತೆ ನೋಡಿರಲೇ ಇಲ್ಲ.

ಹಾವೆಂದರೆ ಮತ್ತೆ ನೆನಪಾಗೋದು ನಂಗೆ ಬೆಕ್ಕು. ನಮ್ಮ ಮನೆಯಲ್ಲೊಂದು ಬೆಕ್ಕಿತ್ತು.ಅದಕ್ಕೆ ಎಲ್ಲಿಂದಾದರೂ ಹಾವೋ, ಕಪ್ಪೆ ಮರಿಯೋ ಇಲ್ಲ ಒತಿಕ್ಯಾತಗಳನ್ನೋ ಹಿಡಿಯುವ ಅಭ್ಯಾಸ.ತಿನ್ನೋದಕ್ಕಲ್ಲ, ಬರೀ ಅವುಗಳನ್ನು ಕಚ್ಚಿ ಅರೆಜೀವ ಮಾಡಿ ಅವುಗಳು ನೋವಿನಿಂದ ಸ್ವಲ್ಪ  ಹರಿದಾಡಿದರೂ ಮತ್ತೆ ಚಂಗನೆ ಅವುಗಳ ಮೇಲೆ ನೆಗೆದು ಆಡುವ ಆ ಪರಿಯನ್ನು ನಾ ಹ್ಯಾಗೆ ವರ್ಣಿಸಲಿ !ಎಲ್ಲಿಂದಲೋ ಹಿಡಿದು ತಂದು ಮನೆಯ ಅಂಗಳದಲ್ಲೋ ಇಲ್ಲ ಮನೆ ಹಿಂದಿನ ಹುಲ್ಲಿನ ಮಂದೆಯಲ್ಲೋ ಹೀಗೆ ಆಡಿ ಆಮೇಲೆ ಅವುಗಳು ಅಲ್ಲಾಡಲು ಅಸಮರ್ಥ ವಾದ ಮೇಲೆ ಅದನ್ನು ಅಲ್ಲಿಯೇ ಬಿಟ್ಟು ಮನೆಯೊಳಗೆ ಬರ್ತಿತ್ತು .ಬೆಕ್ಕಿನ ಎಂಜಲು ಅಮೃತ ಅಂತೆ !ಇದ್ದರೂ ಇರಬಹುದು ,ನಮ್ಮ ದೊಡ್ದಮ್ಮನಂತೂ ಅದನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ .ಪಾಪ ಅವರಿಗೆ ದಿನವೂ ಮನೆಯ ಸುತ್ತ ಮುತ್ತಲಿನಲ್ಲಿ ಬಿದ್ದಿರುತ್ತಿದ್ದ ಈ ಪ್ರಾಣಿಗಳ ಹೆಣವನ್ನು ಬಿಸಾಕೋದೇ ದೊಡ್ಡ ಕೆಲಸವಾಗಿತ್ತು..ಹಾಗೇ ಬಿಟ್ಟರೆ ಕೆಟ್ಟ ವಾಸನೆ ಬೇರೆ! ಅಂತೂ ಒಂದು ದಿನ ನಾನು ಇಲ್ಲದ ಸಮಯ ನೋಡಿ ನನ್ನ ಬೆಕ್ಕನ್ನು ಎಲ್ಲೋ ದೂರ ಬಿಟ್ಟು ಬರಲು ಗದ್ದೆ ಕೆಲಸದವರಿಗೆ ಹೇಳಿದ್ದರು.ಇಲ್ಲದಿದ್ದರೆ ಒಂದು ದಿನ ಖಂಡಿತವಾಗಲು ಸರ್ಪ ಸಂಸ್ಕಾರದ ಭಾಗ್ಯ(?) ಸಿಗುತಿತ್ತು !ನಂತರ ನಮ್ಮ ಮನೆಗೆ ಬಂ(ತಂ)ದ ಬೆಕ್ಕು , ಇಡೀ ಬೆಕ್ಕಿನ ಜಾತಿಗೆ ಅವಮಾನ!ಎದುರಲ್ಲಿ ಹಾವು ಹರಿದರೂ ಅಷ್ಟೇ ,ಹೆಗ್ಗಣ ಓಡಿದರೂ ಅಷ್ಟೇ !ಮಹಾನ್ ನಿರ್ಲಿಪ್ತ! ಅಡಿಗೆಮನೆ ಮತ್ತು ಅಲ್ಲಿರುವ ಹಾಲು ಬಿಟ್ಟರೆ ಮತ್ತೊಂದು ವಿಷ್ಯ ಗೊತ್ತಿರಲಿಲ್ಲ ಅದಕ್ಕೆ!

ಈ ಒಂದೊಂದು ಹಾವುಗಳು ಮತ್ತು ಅವುಗಳ ವಿಷದ ಸಾಮರ್ಥ್ಯದ ಹಿಂದಿರುವ ಒಂದೊಂದು ಕಥೆಯೂ ಅಧ್ಬುತ ,ನಾಗರ ಹಾವು,ಕನ್ನಡಿ ಹಾವು ,ಕಡಂಬಳ್ಕ ಹಾವು, ತೌಡ್ ಹಪ್ಪಳ್ಕ,ಪಟ್ಟೆ ಹಾವು, ಮರ ಹಾವು,ಕೆರೆ ಹಾವು, ಒಳ್ಲೆ ಹಾವು,ಹಸಿರು ಹಾವು,ಹೈನ್ಸರ ಹಾವು,ಜಡೆ ಹಾವು, ಒಂದಾ.. ಎರಡಾ..ಸೊಳ್ಳೆ,ಕ್ರಿಮಿ ಕೀಟಕ್ಕೊಸ್ಕರ ನೆಗೆದಾಡುವ ಕಪ್ಪೆಗಳು, ಆ ಕಪ್ಪೆಗಳಿಗಾಗಿ ಹೊಂಚು ಹಾಕೋ ಹಾವುಗಳು ,ಆ ಹಾವುಗಳನ್ನು ಎತ್ತಿಕೊಂಡು ಹೋಗೋ ಹದ್ದುಗಳು…ಈಗಿನ ಮಕ್ಕಳು ಪುಸ್ತಕದಲ್ಲಷ್ಟೇ ನೋಡಬೇಕು ಅಥವಾ ಮೃಗಾಲಯದಲ್ಲಿ ಅಷ್ಟೇ.ಅಳಿಯುತ್ತಿರುವ ಸಂತತಿಗಳಲ್ಲಿ ಈ ಸರೀಸೃಪಗಳೂ ಸೇರಿ ಕಾಲಕ್ರಮೇಣ ಹಾವುಗಳು ಮತ್ತು ಹಾವಿನ ಹುತ್ತಗಳು ಚಿತ್ರದಲ್ಲಷ್ಟೇ ಸಿಗಬಹುದು !

ಆಗ :

ಓಡುವ ಕಾಲ ಕೆಳಗೆ ಜಾರುವ ಗದ್ದೆ ಅಂಚು
ಮೇಲೆ ಕರಿ ಮೋಡಗಳ ಮಧ್ಯದ ಕೋಲ್ಮಿಂಚು
ರಾತ್ರಿಯಿಡೀ ಕೇಳುವ ಗುಡುಗಿನ ಅಸ್ಪಷ್ಟ ಆರ್ಭಟ
ಹೆಂಚಿನ ಮಾಡಿನಿಂದಿಳಿವ ಮಳೆಯ ನಿಲ್ಲದ ಚಟಪಟ
ಅಜ್ಜಿಯ ಮಹಾಭಾರತದ ಕಥೆಗೆ ಹೂoಗುಟ್ಟುತ್ತಾ
ಸುಟ್ಟ ಹಪ್ಪಳದ ರುಚಿಯನ್ನೇ ಮತ್ತೆ ಮತ್ತೆ ಮೆಲ್ಲುತ್ತಾ…
ಹೊದ್ದ ಕಂಬಳಿಯೊಳಗೆ ಬೀಳುವ ಕನಸೆಲ್ಲಾ ಮಳೆಯದ್ದೆ
ಬೆಳಗ್ಗೆ ಹನ್ನೊಂದಾದರೂ ಮುಗಿಯದ ಆ ಸುಖ ನಿದ್ದೆ
ಹಾಂ, ನೆರೆ ಬಂದಾಯ್ತು ಬಿಡದೆ ಸುರಿದ ಮಳೆಯಿಂದ
ರಜೆ ಇವತ್ತಿಂದ ಶಾಲೆಗೆ, ಏರಿದ ನೆರೆ ಇಳಿವ ತನಕ
ಸುರಿವ ಮಳೆಯಲ್ಲಿ ಆಡುತ್ತಾ ಊಟದ ಪರಿವಿಲ್ಲ
ದಿನವೂ ಒದ್ದೆ ಬಟ್ಟೆಯೇ, ಸೂರ್ಯನ ಸುಳಿವೇ ಇಲ್ಲ
ಕೆಸರಲ್ಲಿ ಬಿದ್ದ ಪುಟ್ಟಿಯ ಸಿಟ್ಟು, ದೂಡಿದ್ದು ಯಾರಾದರೂ ಬಿಡೋದಿಲ್ಲ
ಎಲ್ಲರಿಗೂ ಗೊತ್ತು ದೂಡಿದ್ಯಾರೆಂದು ಕೊನೆಗೂ ತಿಳಿಯೋದೇ ಇಲ್ಲ :)
ರಾತ್ರಿಯಾಗಿ ಬಿಸಿ ಬಿಸಿ ಉಂಡು ಮಲಗಿದರೆ ಮತ್ತೆ ಮಳೆಯೇ ಜೋಗುಳ
ಮನೆಯ ಹೊರಗೆಲ್ಲೋ ವಂಡರಗಪ್ಪೆ, ಜೀರುಂಡೆಗಳ ನಿಲ್ಲದ ಗಾಯನ

ಈಗ :

ಕೈಲಿ ಲ್ಯಾಪ್ ಟಾಪ್, ತಲೇಲಿ ಬರೀ ಅಕೌಂಟ್ಸ್ ಇರಬೇಕು
ನಮ್ಮವರ್ಯಾರು ಇಲ್ಲದ ನಮ್ಮದು ಬರೀ ಯಾಂತ್ರಿಕ ಬದುಕು
ನಿಂತ ಕಪ್ಪು ಗಾಜಿನಾಚೆಗೆ ಇಲ್ಲಿ ಹಗಲು ರಾತ್ರಿಯೆಲ್ಲವೂ ಒಂದೇ
ಎಲ್ಲಿಂದ ಎಲ್ಲಿಗೆ ತಂದು ನಿಲ್ಲಿಸಿತಲ್ಲ, ಈ ಬದುಕ್ಯಾಗೆ ಹಿಂಗೆ?
ಟೀಂ ಲೀಡರ್ ಒಂದು ಗುಯ್ಗುಡುವ ಸೊಳ್ಳೆ 
ಕ್ಲೈಂಟ್ ಗಳೋ ಸದಾ ವಟಗುಡುವ ವಂಡರಗಪ್ಪೆ
ಜನಸಾಗರ ಬಿಟ್ಟರೆ ಮತ್ಯಾವ ನೆರೆ ತೆರೆಯೂ ಇಲ್ಲಿಲ್ಲ
ಸೊಳ್ಳೆ ಒಳ ಬರಲೂ ಇವರು ಆಕ್ಸೆಸ್ ಕೊಡೋದಿಲ್ಲ
ಟೀಂ ಲಂಚ್, ಗೆಟ್ ಟುಗೆದರ್ ಗಳ  ಹಿಂಡಿನಲ್ಲಿ ನಮ್ಮತನ ಬಿಟ್ಟಾಗಿದೆ
ಛೀ,ಕೈಯಲ್ಲಿ ಊಟ ಮಾಡೋದಾ..ಮ್ಯಾನರ್ಸ್ ನ ಹೆಸರು ಇಟ್ಟಾಗಿದೆ
ಮೋಜು ಮಸ್ತಿಯಲ್ಲಿ ಓಲಾಡಿ, ಕೊಟ್ಟ ಐದಂಕಿಯ ಬಿಲ್ಲೊಂದು ಲೆಕ್ಕವೇ ಅಲ್ಲ
ಹೊರಗೆ ತಂಗಳನ್ನ ತಿಂದ ಮುದುಕ ಇವರ ಪ್ರಕಾರ ಬದುಕಲು ಲಾಯಕ್ಕಿಲ್ಲ.

ಹ್ಮ್..  ಚಿಕ್ಕವರಾಗೆ ಇರಬೇಕಿತ್ತು ಅಲ್ಲೇ ಕಾಗದದ  ದೋಣಿ ಬಿಡುತ್ತಾ
ದೊಡ್ಡವರ್ಯಾಕದೆವೋ ಬರೀ ಅರ್ಥವಾಗದ ಗೊಂದಲಗಳೇ ಸುತ್ತಾ :(

“ವಿಶ್ ಯೂ ಹ್ಯಾಪಿ ಬರ್ತ್ ಡೇ “..ಅಕ್ಕರೆಯಿಂದ ಕೈ ಕುಲುಕಿದ ಮನುವಿನ ಕಣ್ಣುಗಳನ್ನೇ ದಿಟ್ಟಿಸಿದೆ. ..ಅಲ್ಲಿದ್ದಿದ್ದು ಪ್ರೀತಿಯೋ ಅಥವಾ ಸ್ನೇಹವೋ ಎಂದು ಒಂದರೆಗಳಿಗೆ ಗೊಂದಲವಾದರೂ ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ.”ನನ್ನ ಪ್ರೀತಿಯ ಸ್ನೇಹಳಿಗೆ ನನ್ನದೊಂದು ಪುಟ್ಟ ಕಾಣಿಕೆ, ದಯಮಾಡಿ ಸ್ವೀಕರಿಸಿಕೊಳ್ಳಬೇಕು”ಎಂದು ನಾಟಕೀಯ ಶೈಲಿಯಲ್ಲಿ  ಹೇಳಿ ತಾನು ತಂದ ಗಿಫ್ಟಿನ ಪ್ಯಾಕನ್ನು ಕೈಯ್ಯಲ್ಲಿಟ್ಟ.ನಾನೊಂದು ನಗು ಸೂಸಿ ಏನೋ ಹೇಳುವಷ್ಟರಲ್ಲಿ,ಬರ್ತೀನಿ ಸ್ನೇಹ, ಕ್ಲಾಸಿಗೆ ಲೇಟಾಗ್ತಿದೆ ಸಂಜೆ ನಂಗೆ ಸ್ಪೆಷಲ್ ಪಾರ್ಟೀನ ಮರಿಬೇಡ ಎಂದು ಬಂದಷ್ಟೇ ವೇಗದಲ್ಲಿ ಕಣ್ಮರೆಯಾದ..ವಾವ್..ಜನ್ಮದಿನದ ಮೊದಲ ಶುಭಾಶಯ ನನ್ನ ಪ್ರೀತಿಯ ಮನುವಿನದ್ದು …ದಿನವೆಲ್ಲಾ ಖುಷಿಯಾಗಿದ್ದೆ ..ಚಿಕ್ಕ ಚಿಕ್ಕ ಘಟನೆಗೂ ಹೆಚ್ಚು ಖುಷಿ ಪಡೋದು ನನ್ನ ಹುಟ್ಟುಗುಣ..ಇಂತಹ ಮನಸ್ಸಿದ್ದಾಗಲೇ ಕಾಣುವ ಪ್ರತೀ ದೃಶ್ಯ ಸುಂದರವಾಗಿ ಕಾಣೋದು!ಅದರಲ್ಲೂ ಹೀಗೆ ಪ್ರೀತಿಯಲ್ಲಿ ಬಿದ್ದರಂತೂ ಕೇಳೋದೇ ಬೇಡ,ಆಡುವ ಮಾತೆಲ್ಲ ಕಾವ್ಯವೇ …ಕಾಡುವ ನೆನಪೆಲ್ಲ ಧ್ಯಾನವೇ …!
ಈ ಪ್ರೀತಿಯೇ ಹೀಗೆ ,ಸದಾ ಕಾಡುವ   ಮೃದು ಭಾವಗಳ ಧೃಡ ಚಿತ್ತಾರ..ಬದುಕಿನಲ್ಲಿ ನನ್ನದೇ ಆದ ಒಂದು ಸುಂದರ ಗುರಿಯಿಟ್ಟುಕೊಂಡು ಮುಂದುವರಿಯುವಾಗ ಅದು ಹ್ಯಾಗೆ ಪ್ರೀತಿಸಲು ಶುರು ಮಾಡಿದೆನೋ ಗೊತ್ತಿಲ್ಲ.ಆದರೆ ಅವನು ನನ್ನನ್ನು ಪ್ರೀತಿಸುತ್ತಿಲ್ಲವೇನೋ ..ಇದೊಂದೇ ಆಗಾಗ ಕಾಡುತ್ತಿರೋದು..ಈ ಏಕಮುಖ ಪ್ರೀತಿ ಅದೆಲ್ಲಿಗೆ ತಲುಪಿಸುತ್ತೋ..ರಾತ್ರಿ ಊಟ ಮುಗಿಸಿ ಪುಸ್ತಕ ಹಿಡಿದು ಕುಳಿತೆ..ಪರೀಕ್ಷೆಗೆ ಇನ್ನೆರೆಡೆ ವಾರವಿತ್ತು..ಹಾಗೆ ಕಿಟಕಿಯಿಂದ ಆಗಸದೆಡೆಗೆ ನೋಡಿದೆ.ಹ್ಮ್.. ಇನ್ನು ಈ ನಕ್ಷತ್ರಗಳನ್ನ ನೋಡಿದ ಮೇಲೆ ಓದೋದಕ್ಕೆ ಮನಸ್ಸೇ ಬರೋದಿಲ್ಲ ..ರಾತ್ರಿಯ ನೀರವತೆಯಲ್ಲಿ ನೆನಪಾಗೋದೇ ಮನು..ಹೀಗೆ ಒಂದು ಬೆಳದಿಂಗಳ ರಾತ್ರಿಯಲ್ಲಿ ಕೇಳಿದ್ದ ಸ್ನೇಹ ,ನೀ ಮದುವೆ ಆಗೋ ಹುಡುಗ ಹ್ಯಾಗಿರಬೇಕು ಅಂತ ..ನಾ ಹೇಳೋ ಮೊದಲೇ ಹೇಳಿದ್ದ,ನನ್ನ ಹೆಂಡತಿ ಹೀಗೆಲ್ಲ ರಾತ್ರಿ,ಆಕಾಶ,ಚಂದ್ರ ಅಂದ್ರೆ ಬಿಟ್ ಓಡೋಗಿ ಬಿಡ್ತೀನಿ ಅಷ್ಟೇ.ಅಲ್ಲ ಸ್ನೇಹ,ಈ ಬೆಳದಿಂಗಳ ರಾತ್ರಿಯಲ್ಲಿ ಈ ಸಮುದ್ರದ ಅಲೆಗಳನ್ನು ನೋಡಬೇಕು ಅಂತ ಮಗು ಹಾಗೆ ಅಷ್ಟು ಹಠ ಮಾಡ್ತಿದ್ದ್ಯಲ್ಲ..ಅಂಥಹ ಖುಷಿ ಏನೀಗ ?ನನಗೇನೋ ಹಗಲಲ್ಲಿ ಕಾಣಿಸೋದು ಈಗ ರಾತ್ರಿಯಲ್ಲಿ  ಅಸ್ಪಷ್ಟವಾಗಿ ಕಾಣಿಸ್ತಿದೆ ಅಷ್ಟೇ !ಹಾಗೆಂದವನನ್ನೇ ದಿಟ್ಟಿಸಿದ್ದೆ..ಹೌದು..ನಾನೂ ಇರಬೇಕಿತ್ತು ನಿನ್ನಂತೆಯೇ…ನಿರ್ಭಾವುಕಳಾಗಿ!

 
ಒಹ್,ಇದೇ ರೀತಿ ಓದುವ ಹೊತ್ತಿನಲ್ಲಿ ಇದನ್ನೆಲ್ಲಾ ನೆನಪಿಸಿಕೊಂಡರೆ ಉದ್ದಾರ  ಆದ ಹಾಗೇನೆ ಅಂದುಕೊಂಡು ಡೈರಿ ಯನ್ನ  ತೆಗೆದೆ.ಅದನ್ನು ಅಪ್ ಡೇಟ್  ಮಾಡದಿದ್ದರೆ ಎಲ್ಲಿಯ ಸಮಾಧಾನ!ಅದರಲ್ಲಿ “ಮನು,ಸದಾ ಕಾಡುವ ನಿನ್ನ ನೆನಪಿನಿಂದ ಓದೋಕೆ ಆಗ್ತಿಲ್ಲ ಕಣೋ ..ಹೀಗೆ ಆದರೆ ನಾ ನನ್ನ ಗುರಿ ಮುಟ್ಟೋದು ತಡ ಆಗಬಹುದು..ಪ್ರೀತಿಸಬಾರದಿತ್ತು ಅಂತ ಸಾವಿರ ಸಲ ಅಂದುಕೊಳ್ಳುವೆ..ಮತ್ತೆ ಪುನಃ ಅದೇ ರಾಗ..ಇನ್ನೊಂದು ತಿಂಗಳಿಗೆ ಪರೀಕ್ಷೆ  ಮುಗಿಯುತ್ತೆ .ಅದೇ ದಿನ ಧೈರ್ಯ ದಿಂದ ಎಲ್ಲ ವಿಷಯ ಹೇಳ್ತೀನಿ..ನೋಡೋಣ ಏನಾಗುತ್ತೆ ಅಂತ ..ಈಗ ಕಿಟಕಿಯಿಂದ ಒಂದೇ ಒಂದು ನಕ್ಷತ್ರ ಕಾಣಿಸ್ತಿದೆ ..ಅಂತಹ ಮಿನುಗುವ ನಕ್ಷತ್ರಗಳೆಲ್ಲ ನನ್ನಂತಹ ಭಾವುಕಿಯರ ಕಾಡುವ ನೂರು ನೆನಪುಗಳಿಗೆ ಸಾಕ್ಷಿ..ಅಂಥಹ ಒಂದು ಕಾಡುವ ನೆನಪು ನೀನು ,ನಿನ್ನ ನೆನಪಿನಲೆಗಳಡಿಯಲ್ಲಿ ದಡ ಸೇರಲು ತವಕಿಸುವ ಪುಟ್ಟ ಹನಿ ನಾನು, ದಡಕ್ಕೆ ಸೇರಿಸುವೆಯೋ ಇಲ್ಲ ತಳದಲ್ಲಿ ಮುಳುಗಿಸುವೆಯೋ ನಿನ್ನಿಷ್ಟ !”..ಹೀಗೆಂದು ಬರೆದ ಮೇಲೆ ಮನಸ್ಸು ನಿಯಂತ್ರಣಕ್ಕೆ ಬಂತು..ಮತ್ತೆ ಸ್ವಲ್ಪ ಓದಿ ಮಲಗಿಕೊಂಡೆ!
ಒಂದರ ಮೇಲೊಂದು ಪರೀಕ್ಷೆ ಮುಗಿದು ನಿರಾಳವೆನ್ನಿಸಿತ್ತು ,ಪ್ರತೀ ಪರೀಕ್ಷೆಗೂ ಮನು ಶುಭ ಕೋರುತ್ತಿದ್ದ..ಪರೀಕ್ಷೆ ಮುಗಿದು ೧೫ ದಿನಗಳಾದರೂ ನನಗೆ ವಿಷಯ ಹೇಳಲು ಧೈರ್ಯ ಬರಲಿಲ್ಲ ..ಮುಂದಿನ ೨ ದಿನಗಳಲ್ಲಿ ಮನು ಬಂದು ತಾನು ಸಹನಾ ಳನ್ನು ಪ್ರೀತಿಸುತ್ತಿರುವ ವಿಷಯ ಹೇಳಿದ.ಅವರ ಭೇಟಿ, ಮಾತುಕತೆ ,ತನ್ನ ಪ್ರೊಪೋಸಲ್ ಹೀಗೆ ಎಲ್ಲವನ್ನೂ ಮನಸಾರೆ ಹೇಳಿಕೊಳ್ಳುತ್ತಿದ್ದರೆ ನನಗೆ ಕೆನ್ನೆ ಮುಟ್ಟಿ ನೋಡಿಕೊಳ್ಳಲು ಸಹ ಭಯವಾಗುತ್ತಿತ್ತು..ಅಳುತ್ತಿಲ್ಲ ತಾನೇ !ತಕ್ಷಣ ಸಾವರಿಸಿಕೊಂಡು ಮನಪೂರ್ವಕವಾಗಿ ಶುಭ ಹಾರೈಸಿದ್ದೆ .ರಾತ್ರಿ ಮಲಗಿದವಳಿಗೆ ನಿದ್ದೆಯ ಮಾತು ದೂರಾಗಿತ್ತು..ಇಲ್ಲಿಯವರೆಗೆ ಅವನೊಂದು ಕನಸಾಗಿದ್ದ ,ಇನ್ನು ಮುಂದೆ ಕೂಡಾ..ಸ್ನೇಹ ನನ್ನ ಪ್ರೀತಿಯ ವಿಷಯವನ್ನು ಅಮ್ಮಂಗೂ ಹೇಳದೆ ಮೊದಲು ಬಂದು ನಿಂಗೆ ಹೇಳ್ತಾ ಇದ್ದೀನಿ ಅಂದ ಅವನ ಕಣ್ಣಲ್ಲಿದ್ದ ಅದೇ ಹೊಳಪನ್ನು ನಾನು ನನ್ನ ಸ್ವಾರ್ಥಕ್ಕೆ ಪ್ರೀತಿಯೆಂದು ಅರ್ಥ ನೀಡಲು ಹೋಗಿದ್ದೇನಾ..ಅಂದಿನ ಡೈರಿ ಯಲ್ಲಿ ಬರೀ sorry ಮನು ಅಂದಷ್ಟೇ ಬರೆದೆ..ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ಏಳುವಾಗ ೯ ಗಂಟೆ ಮೀರಿತ್ತು..ಅಡುಗೆ ಮನೆಯಲ್ಲಿ ಎದುರಾದ ಅಮ್ಮನ ಸ್ವರ..ಮನು ಬಂದಿದ್ದ ಪುಟ್ಟಾ ..ನೀ ಮಲಗಿದ್ದು ನೋಡಿ ಎಬ್ಬಿಸದೆ ಹಾಗೆ ಹೋದ .ಏನೂ  ಹೇಳದೆ ಸುಮ್ಮನಾದೆ..ಮೊದಲೆಲ್ಲಾ ಗುನುಗುನಿಸುತ್ತಿದ್ದ ಹಾಡುಗಳು ಅಂದು ಗಂಟಲಿಗೆ ಬರಲೇ ಇಲ್ಲ ..ಬೀರುವಿನಿಂದ ಬಟ್ಟೆ ತೆಗೆಯುವಾಗ  ಅಲ್ಲಿದ್ದ  ಆಟೋಗ್ರಾಫ್ ನೋಡಿ ಶಾಕ್ !ಹಾಗಾದ್ರೆ ಡೈರಿ ??! ಓಹ್  ಏನೋ ಆಲೋಚಿಸುತ್ತಾ ಟೇಬಲ್  ಮೇಲಿಡಬೇಕಿದ್ದ  ಆಟೋಗ್ರಫಾನ್ನು ಬೀರುವಲ್ಲಿಟ್ಟು, ಡೈರಿಯನ್ನು ಟೇಬಲ್ ಮೇಲಿಟ್ಟಿದ್ದೆ.ಎಲ್ಲಿತ್ತು ಅಲ್ಲಿ?ನೆನಪಾಗಿ ನಡುಗಿಬಿಟ್ಟೆ.. ಅಂದರೆ..ಅಂದರೆ ..ಮನು ತೆಗೆದುಕೊಂಡು ಹೋಗಿದ್ದು ಸ್ಪಷ್ಟ!ಕೂಡಲೇ ರಸ್ತೆಗಿಳಿದೆ..ಎದುರಲ್ಲೇ ಮನು ಬರುತ್ತಿದ್ದ ..ಕೈಯಲ್ಲಿ ನನ್ನ ಡೈರಿ!ಕೇವಲ ಒಂದು ಘಂಟೆಯಲ್ಲಿ ಓದಿಬಿಟ್ಟನಾ..ಏನೂ ಮಾತಾಡದೆ ಡೈರಿ ಕೈಯಲ್ಲಿಟ್ಟ..ಕಣ್ಣು ನೋಡಿ ಮಾತಾಡಲೂ ಭಯ..ಮತ್ತೆ ಸಿಗ್ತೀನಿ ಅಂದು ಹೇಳಿ ಹೋದ ಅವನ ಮನೋಭಾವವನ್ನು ಗ್ರಹಿಸಲಾಗದೆ ಹೋದೆ.ಯಾಕೋ ತಳಮಳ ಜಾಸ್ತಿ ಆಗತೊಡಗಿತು..ಇನ್ನೊಂದು ತಿಂಗಳಿನಲ್ಲಿ ಕೋಚಿಂಗ್ ಗೋಸ್ಕರ ದೂರದಲ್ಲಿದ್ದ ಮಾಮನ ಮನೆಗೆ ಹೋಗೋಳಿದ್ದೆ..ಆದ ಬೇಜವಾಬ್ದಾರಿತನಕ್ಕೆ ನನ್ನ ಮೇಲೇನೆ ಸಿಟ್ಟು ಬಂತು.ಆ ದಿನ ರಾತ್ರಿ ಎಂದಿನಂತೆ ಡೈರಿ ತೆಗೆದಾಗ ಅಲ್ಲಿ ಒಂದು  ಪತ್ರವಿತ್ತು !ಮನುವಿನ ಕೈಬರಹ!!ಉದ್ವೇಗದಿಂದ ಓದಿದೆ…
“ಸ್ನೇಹ ,
ಏನ್ ಬರೀಬೇಕು ಅಂತ ಗೊತ್ತಿಲ್ಲ,ನೀನು ನನ್ನ ಪ್ರೀತಿಸುತ್ತಿದ್ದಿ ಅಂತ ಊಹಿಸೋಕು ಆಗ್ತಿಲ್ಲ ನಂಗೆ..ಗುರಿ,ಕನಸು  ಮುಖ್ಯ ಅಂತಾನೆ ಇದ್ಯಲ್ಲ, ಒಂದೇ ಸಲ ಏನಾಗಿದ್ದು ನಿಂಗೆ?..ಹೋಗ್ಲಿ ..ಈಗ ಸಹನಾಳ ವಿಷ್ಯ ನಿಂಗೆ ಗೊತ್ತು..ಆದರೆ ಆ ಒಂದು ಕಾರಣಕ್ಕೆ ನಿನ್ನ ದೂರ ಮಾಡ್ಕೊಳ್ಳೋಕೆ ನಂಗೆ ಆಗಲ್ಲ..ಹಾಗಂತ ಸಹನಳನ್ನು ಬಿಡೋಕೂ ಆಗೋಲ್ಲ..ನನಗೆ ಶಿಸ್ತು ಕಲಿಸಿದವಳು ನೀನು, ಸೋತಾಗ ಧೈರ್ಯ ತುಂಬಿದವಳು ನೀನು..ಬದುಕನ್ನು ಇಷ್ಟ ಪಡುವಂತೆ ಮಾಡಿದವಳು ನೀನು..ಇನ್ನು ಮುಂದೆ  ಮೊದಲಿನಂತೆ ಫ್ರೆಂಡ್ ಆಗಿರೊದ ಇಲ್ಲ ದೂರ ದೂರಾನೇ ಇರೋದಾ ..ಸಲಹೆ ನಿನ್ನದು.ಏನೇ ಆದರೂ ಪಾಲಿಸುವೆ “
“ಮನು “…

ನಾ ಮುಂದೊಂದು ಕ್ಷಣವೂ  ಯೋಚಿಸಲಿಲ್ಲ, ಕೂಡಲೇ ಪೆನ್ನು  ಹಾಳೆ ಹಿಡಿದು ಕುಳಿತೆ,
“ಮನು ,
ಇನ್ನೇನು ಸತ್ತು ಕೇವಲ ನೆನಪಾಗಿ ಉಳಿಯಬೇಕಿದ್ದ ಸಂಬಂಧಕ್ಕೆ ಇಂಥಹ ಒಂದು ತಿರುವು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ..ಒಹ್ ,ನಾನು ನೋಡು ..ನನ್ನ ಭಾವುಕತೆಯ ವಾಕ್ಯಗಳು ನಿಂಗೆ ಅರ್ಥ ಆಗಲ್ಲ ಆಲ್ವಾ ..ಹ್ಮ್..ಅರ್ಥ ಆಗದಿದ್ದರೂ ವ್ಯರ್ಥವಾಗದಿದ್ದರೆ ಸಾಕಷ್ಟೇ.ನಾನು ನಿನ್ನ ನಡೆ ನುಡಿ ,ನಗುವಿಗೆ ಸೋತಿರಬಹುದು.ನಿನ್ನ ತುಂಟ ನಗು ,ನೋಡುವ ನೇರ ನೋಟ, ಮಾತಾಡಿಸುವ ರೀತಿ ಎಲ್ಲ… ಎಲ್ಲವೂ. ಇಷ್ಟವಾಗಿತ್ತು ನಂಗೆ !ಆದರೆ ಈಗ ಗೊತ್ತಿದ್ದೂ ಗೊತ್ತಿದ್ದೂ ಸಹನಳಂತ ಮುಗ್ಧ ಹುಡುಗಿಗೆ ಮೋಸ ಮಾಡಲು ತಯಾರಿಲ್ಲ ನಾನು.ನನ್ನಷ್ಟಕ್ಕೆ ಬದುಕಲು ನಿನ್ನ ನೆನಪುಗಳೊಂದಷ್ಟಿದ್ದರೆ ಸಾಕು.ಬದುಕನ್ನು ಬಂದ ಹಾಗೆ ಸ್ವೀಕರಿಸಿ ,ಅದಕ್ಕೆ ಮತ್ತೆ ಕನಸಿನ ,ಭರವಸೆಯ ಬಣ್ಣ ತುಂಬಲು ಗೊತ್ತಿದೆ ನಂಗೆ. ಬಿಡು ,ಸಿಗದ ವಸ್ತುವಿಗೆ ಎಂದೂ ಮರುಗಿದವಳಲ್ಲ ನಾನು.ಕಾಲ ಎಲ್ಲವನ್ನೂ ಮರೆಸುತ್ತೆ ಅಂತಾರೆ,ನೋಡೋಣ…..ಆದರೂ ಕೊನೆಗೂ.. ಸಿಗದ ಪ್ರೀತಿಗೆ ,ಕೈ ಜಾರಿದ ಕನಸಿಗೆ. ಕಣ್ಣಂಚಿನ ಹನಿಗೆ ಕಾರಣವಾದ ನಿನ್ನ ಬಗೆಗೊಂದು ಅವ್ಯಕ್ತ ಭಾವ ಕೊನೆಯವರೆಗೂ ಕೊರಗುವಂತೆ ಇರಬಾರದಷ್ಟೇ!ಮದುವೆಗೆ ಎಲ್ಲಿದ್ದರೂ ಬಂದೇ ಬರುವೆ.
take care..
“ಸ್ನೇಹ “…

ಬರೆದು ಮುಗಿಸಿ ಪತ್ರ ನಾಳೆಯೊಳಗೆ ಮನುವಿನ ಕೈ ಸೇರುತ್ತದೆ ಎಂದು ಖಾತ್ರಿಯಾದ ಮೇಲೆ ಮಾಮನಿಗೆ ಫೋನ್ ಮಾಡಿ ಬೆಳಿಗ್ಗೆನೆ ಬರಲಿರುವೆ ಎಂದು ತಿಳಿಸಿದೆ.ಆಮೇಲೆ ಎಂದರೆ ನನ್ನ ನಿರ್ಧಾರ ಬದಲಾಗಬಹುದು.ಲಗ್ಗೇಜ್ ಪ್ಯಾಕ್ ಮಾಡುತ್ತಾ ರಾತ್ರಿಯಾಗತೊಡಗಿತು..ಒಳಗೆ ಅಮ್ಮ ಫೋನ್ ನಲ್ಲಿ ತನ್ನ ಅಣ್ಣನ ಹತ್ತಿರ ಹೇಳುತ್ತಿದ್ದರು ಏನು ಹುಡಿಗಿಯೋ  ಮುಂದಿನ ತಿಂಗಳು ಹೋಗ್ತೀನಿ ಅಂತಿದ್ದೊಳು ಈಗ ನಾಳೆನೇ ಹೋಗ್ತಾಳಂತೆ..ಅರ್ಥ ಮಾಡ್ಕೊಳ್ಳೋಕೆ ಆಗಲ್ಲ ಈಗಿನವರನ್ನ…ತೆಗೆದುಕೊಂಡ ಧೃಡ ಮತ್ತು ಸ್ಪಷ್ಟ ನಿರ್ಧಾರದಿಂದ ಮನಸ್ಸು ತುಂಬಾನೇ ಹಗುರಾಗಿತ್ತು .ಪಕ್ಕದ ಸಮುದ್ರದ ತೀರ ನೆನಪಾಯ್ತು.ಯಾಕೋ ಹೋಗಬೇಕೆನಿಸಲಿಲ್ಲ..ಹೋದರೆ ಆ ತೀರದ ಹೆಜ್ಜೆ ಗುರುತುಗಳಲ್ಲಿ ಮನು, ಸಹನಾರ ಹೆಜ್ಜೆಗುರುತಿನ ಪಕ್ಕದಲ್ಲಿರುವ ನನ್ನ ಹೆಜ್ಜೆಯ ಅಸ್ತಿತ್ವದ ಸೆಲೆ ಕಾಣದೆನೋ…ಕತ್ತೆತ್ತಿ ರಾತ್ರಿಯಾಗಸವನ್ನು ನೋಡಿದೆ ..ನಕ್ಷತ್ರಗಳು ಕೂಡಾ ಮೊದಲಿನಂತೆ ಮನಸನ್ನು ಕೆಣಕದೆ ಅವುಗಳ ಪಾಡಿಗೆ ಅವು ಸುಮ್ಮನೆ ಮಿನುಗುತಿದ್ದವು !

ನೆನಪುಗಳು!ಇವೇ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತವೆ.. ಮತ್ತವೇ ನೊಂದ ಮನಸ್ಸನ್ನು ಸಂತೈಸುತ್ತವೆ ಕೂಡಾ!ಅವುಗಳು ಸದಾ ನಮ್ಮ ಅದೊಂದು ಕಾಲದ…ಅನ್ನೋ ನೆನಪಿನ ಗಣಿಯ ವಜ್ರ.ಸರಿಯಾಗಿ ಏಳೆಂಟು ವರ್ಷಗಳ ಹಿಂದೆ ಹೈಸ್ಕೂಲ್ ಮುಗಿಸುವ ತರಾತುರಿಯಲ್ಲಿದ್ದೆವಲ್ಲ.ಆಗೆಲ್ಲ ನಮಗೆ ಬದುಕು ಇಷ್ಟು ಬೇಗ ಆಧುನಿಕವಾಗಿ ಬಿಡಬಹುದು ಅನ್ನೋ ಕಲ್ಪನೆಯೇ ಇದ್ದಿರಲಿಲ್ಲ.ಯಾವ ಗೋಜಲು,ಗೊಂದಲ ಗಳೇ ಇಲ್ಲದ ದಿನಗಳವು!ಸ್ಕೂಲ್ ಡೇಯ ಹಿಂದಿನ ದಿನ ನಾಟಕ ,ಡ್ಯಾನ್ಸ್ ಪ್ರಾಕ್ಟಿಸ್ ಮಾಡಿ ಶಾಲೆಯ ಹಿಂದಿದ್ದ ಮರಗಳ ಅಡಿ ಕುಳಿತು ಮಾತಾಡುವಾಗ ಬಹುಶಃ ನಮ್ಮ  ನಾಲ್ವರಿಗೂ ಗೊತ್ತಿತ್ತು ಮುಂದೆ ಹೀಗೆ  ಭೇಟಿ ಆಗೋದು  ಕಷ್ಟ ಅಂತ.ಅಷ್ಟು ದೂರದ ಕಾಲೇಜಿಗೆ ನಮ್ಮೆಲ್ಲರ ಮನೇಲಿ ಕಳಿಸ್ತಾರೋ ಇಲ್ವೋ ಏನೇ ಆದರೂ ಸಿಗ್ತಾನೆ ಇರೋಣ ಆಯ್ತಾ ಅಂದಾಗ ಹಾಂ ಆಯ್ತು ಅದಕ್ಕೇನು ಅಂದಿದ್ದೆ..ಆಮೇಲೆ ದಿನಗಳೆಲ್ಲ ಹ್ಯಾಗೆ ಓಡಿಬಿಟ್ಟವಲ್ಲ, !ಈಗ ಕಾಡುತ್ತಿವೆ ನೆನಪುಗಳು ಸಾಯುವಷ್ಟು…!
ಅಂದುಕೊಂಡಿದ್ದು ಸಾಧಿಸಿ ಸಂಪೂರ್ಣವಾಗಿ ಆಧುನಿಕತೆಯ ಗೂಡೊಳಗೆ  ಬಂದ ಮೇಲೆ ಇಂದು ಎಲ್ಲವೂ ಇದೆ ಇಲ್ಲಿ ..ಸಮಯ ಮರೆಸುವ ಸ್ನೇಹಿತರು ,ಅಂತರ್ಜಾಲಗಳು, ರೆಸಾರ್ಟ್, ಗೇಮ್ಸ್,ಪಿಕ್ನಿಕ್ ,…ಇನ್ನೂ..ಆದರೆ ಬರೀ ನೂರು ಪುಟಗಳ ನನ್ನ ಹಳೆಯ ಆಟೋಗ್ರಾಫ್ ಕೊಡೊ ಅಧ್ಬುತ ಭಾವುಕತೆಯನ್ನು ಯಾವ ಆರ್ಕುಟ್, ಫೇಸ್ ಬುಕ್ ಗಳು ಕೂಡಾ ಕೊಡಲಾರವು..ಈ ಆಟೋಗ್ರಾಫ್ ನಲ್ಲಿ ರಜನಿ ಬರೆದ ಒಂದು ವಾಕ್ಯವಿದೆ “ನಮ್ಮ ಜೀವನ ಒಂದು ಬಸ್ ಪ್ರಯಾಣ ಇದ್ದ ಹಾಗೆ .ನಮ್ಮ ನಮ್ಮ ಸ್ಟಾಪ್ ಬಂದಾಗ ಇಳಿದು ಕೊಳ್ಳಲೇಬೇಕು”..ಹೇಯ್, ತಿರುಗಿ ಬಂದಿದ್ದೆನಲ್ಲಾ  ನೀವೆಲ್ಲ ಇಳಿದಲ್ಲಿ ನಿಮ್ಮನ್ನು ಹುಡುಕಿಕೊಂಡು !!?ಎಲ್ಲಿದ್ರಿ ನೀವೆಲ್ಲಾ ಅಲ್ಲಿ ?ಬರೀ 4-5 ವರ್ಷದಲ್ಲೇ ನಿಮ್ಮ ಮೂರೂ ಜನರ ಮದುವೆಯಾಗಿ ಎಲ್ಲೆಲ್ಲೋ ಹೋಗಿಬಿಟ್ಟಿರಲ್ಲ..ನಿನ್ನ ಅಡ್ರೆಸ್ ,ಫೋನ್ ನಂಬರ್ ತುಂಬಾ ಹುಡುಕಿದ್ಲು.ಅಡ್ರೆಸ್ ಕೊಡಲೇ ಇಲ್ವಂತೆ ನೀನು.ಮದುವೆಗ್ ಕರಿಯೋಕೆ ಆಗಲಿಲ್ಲ ಅಂತ ಎಸ್ಟ್ ಬೇಜಾರ್ ಮಾಡ್ಕೊಂಡ್ಲು ಗೊತ್ತ ..ಹೆಚ್ಚು ಕಮ್ಮಿ ಮೂವರ ಮನೆಯಲ್ಲೂ ಹೇಳಿದ ಮಾತಿದು ..ಪೇಲವ ನಗೆ ನಕ್ಕಿದ್ದೆ..ಮುಂದೆ ಎಲ್ಲಿ ಹ್ಯಾಗೆ ಎಷ್ಟು ಓದ್ತೀನಿ ಅಂತ ಗೊತ್ತಿಲ್ಲದವಳು ಏನು ಅಡ್ರೆಸ್ ಕೊಟ್ಟಿರಬೇಕಿತ್ತು?ನಿಮ್ಮೆಲ್ಲರ ಮದುವೆ ಆಲ್ಬಮ್ ನೋಡ್ಲಿಕ್ಕೆ ಸಿಕ್ಕಿದ್ದಷ್ಟೇ ಪುಣ್ಯ !
ಹಾಗೆ ವಾಪಾಸ್ ಬರೋವಾಗ ಶಾಲೆಯ ಬಳಿ ಹೋಗಿದ್ದೆ..ಸಡನ್ ಆಗಿ “ಮೈ ಆಟೋಗ್ರಾಫ್ ” ಸಿನೆಮಾ ನೆನಪಾಗಿತ್ತು .ಎಡ ಬದಿಯಲ್ಲಿ ವನ ಮಹೋತ್ಸವ ದ ದಿನ ನೆಟ್ಟ ಹೆಸರು ಗೊತ್ತಿಲ್ಲದ ಗಿಡ ಅಷ್ಟೆತ್ತರಕ್ಕೆ  ಬೆಳೆದಿತ್ತು.ಬೆಳಿಗ್ಗೆ ಬೇಗ ಹೋಗಿ ಸರದಿಯ ಪ್ರಕಾರ ಗಿಡಗಳಿಗೆ ನೀರು ಹಾಕಿದ್ದು,ಗಾಳಿ ಮರದ ಕೆಳಗೆ ಸಾಲಾಗಿ ಕುಳಿತು ಓದಿದ್ದು . ಯಾವುದಾದರೂ ಸರ್ ಬರದಿದ್ದಾಗ ಖುಷಿಯಿಂದ ಆಫಿಸ್ ರೂಮ್ನಿಂದ ಓಡಿಬಂದು ಕ್ಲಾಸಿಗೆಲ್ಲ ಕಿರುಚಿ ಹೇಳಿದ್ದು, ..ನೆನಪಿಸಿಕೊಂಡಷ್ಟೂ …..
ಆಟದ ಮೈದಾನದ ಪಕ್ಕದಲ್ಲಿದ್ದ ಬಾವಿಯನ್ನೊಮ್ಮೆ ಇಣುಕಿ ನೋಡಿದಾಗ ಏನೋ  ತಳಮಳ !ಅದ್ಯಾಕೆ ಕಣ್ಣಲ್ಲಿ ನೀರು ?ಪಕ್ಕದಲ್ಲಿ ರಸ್ತೆಗೆ ಡಾಂಬರು  ಹಾಕುತ್ತಿದ್ದವರಿಗೆನೋ ಅನುಮಾನ!ಮತ್ತೆ ಸರಿಯೆನಿಸದೆ ವಾಪಸ್ಸಾಗ ಹೊರಟವಳು ನಿಂತು ಬಿಟ್ಟೆ .ಕೊನೆಯ ಪರೀಕ್ಷೆಯ ದಿನ ಹಿಂದಿದ್ದ ಮಾವಿನ ಮರ ಹತ್ತಿ ಹೊಸ ಟೊಂಗೆಯೊಂದಕ್ಕೆ  ನಮ್ಮ ನಾಲ್ವರ ಬಳೆಗಳನ್ನು ಹಾಕಿ ಬಂದಿದ್ದೆವಲ್ಲ ಪ್ರತೀ ವರ್ಷ ಇದೇ ಮಾರ್ಚ್ ನಲ್ಲಿ ಬಂದು ನೋಡೋಣ ಅಂತ,,,ಓಡಿಬಂದು ನೋಡಿದ್ದೆ.ಅರೇ..ಅಲೆಲ್ಲಿತ್ತು ಮರ ?ಅಲ್ಲೊಂದು ಮರವಿದ್ದಿದ್ದೆ ಸುಳ್ಳು ಅನ್ನೋ ಹಾಗೆ ಸಮತಟ್ಟಾದ ನೆಲ .ಪಕ್ಕದಲ್ಲಿ ದೊಡ್ಡ ಟವರ್!ನೀವೆಲ್ಲಾ ಹೋಗಿ ನೋಡಿ ನನ್ನ ತುಂಬಾ ನೆನಪಿಸಿಕೊಂಡಿರಬಹುದಲ್ಲಾ?!
ಎಲ್ಲಿ ಹೋದ್ರಿ ನೀವೆಲ್ಲಾ..ಆ ಮರದಡಿ ಬಿದ್ದ  ಮಿಡಿ ಗಾಯಿಗಳನ್ನು ಕಾಗೆ ಎಂಜಲು  ಮಾಡಿ ತಿಂದ ದಿನಗಳೆಲ್ಲಿ ಹೋಯ್ತು.ಗುಡ್ಡದ ಹಿಂದೆ ಹೋಗಿ ಕಲ್ಲುಗಳನ್ನು ಒಲೆಯಂತಿರಿಸಿ ಮನೆಯಿಂದ ಕದ್ದು ತಂದ ಬೆಲ್ಲವನ್ನು ಪುಟ್ಟ ಪಾತ್ರೆಯಲ್ಲಿ ಬಿಸಿ ಮಾಡಿ ತಿನ್ನುತಿದ್ದ ನಮ್ಮ ನಾಲ್ವರಲ್ಲಿ ನಾನು ಮಾತ್ರ ಯಾಕೆ ಬೇರಾದೆ ..ಯಾಕಿಷ್ಟು ಬದಲಾದೆ?!ಬಿದ್ದ ಹಣ್ಣು ತಿನ್ನೋದ್ಯಾಕೆ ಅಂತ ಎತ್ತರದ ಗೇರು ಮರ ಹತ್ತಿ ಹಣ್ಣನ್ನು ಅಲ್ಲೇ ಕೂತು ತಿಂದು ಇಳಿದಾಗ ಅಂಗಡಿಯ ಅಜ್ಜ ಎಂಥ ಗಂಡು ಬೀರಿ ಇವಳು ಅಂದಾಗ ಕಣ್ಣಲ್ಲಿ ನೀರು ತರಿಸಿಕೊಂಡು ಓಡಿದವಳು ಇಂದು ತಪ್ಪು ಮಾಡಿ ಅದನ್ನೇ ಸಮಜಾಯಿಸಿಕೊಂಡು  ಇದು ನನ್ನ “attitude” ಅನ್ನೋ ಹೆಸರು ಕೊಡ್ತೀನಿ .ಭಾಷೆ ,ದೇಶ ಅಂತ ಭಾಷಣ ಬಿಗಿತಿದ್ದವಳು ಇಂದು ಯಾವುದೋ ದೇಶದ ಅಕೌಂಟ್ಸ್ ನೋಡ್ತೀನಿ.ಸ್ವಲ್ಪ ಬದುಕು ಬದಲಾಯಿಸಿದ್ದು,,ಉಳಿದದ್ದು ನಾನೇ ಬದಲಾಯಿಸಿಕೊಂಡಿದ್ದು ..ಹ್ಮ್…..ನಿಮ್ಮನ್ನೂ ಬದುಕು ಈಗ ಯಾವ್ಯಾವ ಗೊಂದಲದಲ್ಲಿ ಇರಿಸಿದೆಯೋ..
 
ಆಗೆಲ್ಲಾ ಆಡಿದ ಆಟ, ಮಾಡಿದ ತುಂಟತನಗಳನ್ನು ನೆನಪಿಸಿಕೊಂಡರೆ ಅವ್ಯಕ್ತ ವೇದನೆಯಾಗುತ್ತೆ, ಆ ಕಾಲ ಇನ್ನೆಂದೂ ಬರದಲ್ಲ ಅಂತ ನೆನಪಾಗಿ …ಒಮ್ಮೊಮ್ಮೆ ಅನ್ನಿಸುತ್ತೆ ನಾವೆಲ್ಲಾ ಸ್ನೇಹದ ನೆರಳಲ್ಲಿ ಒಂದಾಗಿ ಇರಲೇಬಾರದಿತ್ತೆಂದು.ನೆನಪಿಸಿಕೊಂಡು ಪ್ರತೀ ಸಲ  ಖಿನ್ನರಾಗೋ ಬದಲು ಆ ನೆನಪುಗಳೇ ಇಲ್ಲದಿರುತ್ತಿದ್ದರೆ??! ನಂಗೊತ್ತು ಈ ಬದುಕು ,ಕಾಲ ಅದೆಲ್ಲಿಯೂ ನಿಲ್ಲೋದಿಲ್ಲ ,ಸದಾ ನಮ್ಮತನಗಳ ವಿಸ್ತರಣೆಯೊಂದಿಗೆ,ಬೀಸುವ ಬಿರುಗಾಳಿಯಂತೆ. ಒಮ್ಮೊಮ್ಮೆ ಮೈ ಮನಸ್ಸು ಪಡೆದ ಗಾಯ, ನೋವುಗಳನ್ನು ಮರೆಸುವ ವೈದ್ಯನಂತೆ ಉರುಳುತ್ತಲೇ ಇರುತ್ತೆ,ಬದುಕ ಜಾತ್ರೆಯಲ್ಲಿ ಸ್ವಾರ್ಥಿಗಳಾಗುತ್ತ ಮುಂದೆ ಹೋಗುವ ತವಕದಲ್ಲಿ ಹಿಂದೆ  ಕಳೆದುಕೊಂಡ ಆಟಿಕೆಗಳ ನೆನಪಿರೋದಿಲ್ಲ ನಮಗೆ ..ನೆನಪಾಗಿ ಹುಡುಕ ಹೊರಟರೆ ಅದು ಮತ್ತೆ ಸಿಗುವುದೂ ಇಲ್ಲ..ಆ ಕಾಲ ಮತ್ತೆ ಬರಲಿ ಅನ್ನಿಸಿದರೂ ಬದುಕಿನ ಜಂಜಾಟ ಬಿಡೋಲ್ಲ,ಯಾರಿಗೂ ಕಾಯದೆ ಚಲಿಸುತ್ತಲೇ ಇರುವ ಕಾಲವನ್ನು ಪುನಃ ತಿರುಗಿಸೋಕೂ ಆಗೋಲ್ಲ..ಆದರೂ ಮತ್ತೆ ಮತ್ತೆ ವ್ಯಥೆಯೆನ್ನಿಸುವುದುಇನ್ನು ಮುಂದೆ  ನೀವೆಲ್ಲಾ ಒಂದು ನೆನಪು ಮಾತ್ರ ನನ್ನ ಪಾಲಿಗೆ ಎಂದು ನೆನಪಾದಾಗ !